Advertisement

ಹಾಸನ: ಲಾಕ್‌ಡೌನ್‌ ವೇಳೆ ಕದ್ದು ಮುಚ್ಚಿ ಬಾಲ್ಯವಿವಾಹ

03:54 PM Sep 21, 2020 | Suhan S |

ಹಾಸನ: ಸಾಮಾಜಿಕ ಪಿಡುಗುಗಳಲ್ಲೊಂದಾದ ಬಾಲ್ಯ ವಿವಾಹ ತಡೆಗೆ ಕಠಿಣ ಕಾಯ್ದೆ ಜಾರಿಯಲ್ಲಿದ್ದರೂ‌ ಕದ್ದು ಮುಚ್ಚಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾಧಿಕಾರಿಗಳ ಕಣ್ಗಾವಲನ್ನೂ ತಪ್ಪಿಸಿ ಬಾಲ್ಯ ವಿವಾಹಗಳಾಗುತ್ತಲೇ ಇವೆ.

Advertisement

ಕೋವಿಡ್ ಸಂಬಂಧ ಲಾಕ್‌ ಡೌನ್‌ ಜಾರಿಯಾದ ನಂತರ ಸರಳವಾಗಿ ವಿವಾಹ ಸಮಾರಂಭಗಳು ನಡೆಯಬೇಕು. 50 ಜನಕ್ಕಿಂತ ಹೆಚ್ಚು ಜನರು ಸೇರಬಾರದು ಎಂಬ ನಿಯಮಗಳು ಜಾರಿಯಾದ ನಂತರ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ಮಕ್ಕಳ ರಕ್ಷಣಾಧಿಕಾರಿ ಗಳು ಅಥವಾ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೋವಿಡ್ ಸಂದರ್ಭದಲ್ಲಿ ಸಂಚರಿಸಲು ಹಾಗೂ ಪ್ರತಿ ಬಂಧಿಸಲು ಸಾಧ್ಯವಾಗದ ಕಾರಣ ನೂರಾರು ಬಾಲ್ಯ ವಿವಾಹಗಳು ನಡೆದಿವೆ ಎಂಬ ಅಂಶ ಬಯಲಾಗಿದೆ.

ಹಾಸನ ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 8 ತಿಂಗಳಲ್ಲಿ 51 ಬಾಲ್ಯ ವಿವಾಹದ ಪ್ರಯತ್ನಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಡೆಗಟ್ಟಿದೆ. ಆ ಪೈಕಿ ಈಗಾಗಲೇ 4 ಬಾಲ್ಯ ವಿವಾಹ ಮಾಡಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ 18 ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಿಗೆ ಸಿದ್ಧತೆ ನಡೆದಿದೆ. ಆದರೆ, ಇಲಾಖೆ ಹಾಗೂ ಅಧಿಕಾರಿಗಳ ಗಮನಕ್ಕೆ ಬರದಂತೆಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಕಳೆದ 8 ತಿಂಗಳಲ್ಲಿಜಿಲ್ಲಾಧಿಕಾರಿಗಳಅಧ್ಯಕ್ಷತೆಯಲ್ಲಿ ಎರಡು ಬಾರಿ ಬಾಲ್ಯ ವಿವಾಹ ತಡೆ ಹಾಗೂ ಅರಿವು ಮೂಡಿಸುವ ಸಂಬಂಧ ಅಧಿಕಾರಿಗಳ ಸಭೆ ನಡೆದಿದೆ. ಮಕ್ಕಳ ರಕ್ಷಣಾಧಿಕಾರಿಯವರ ನೇತೃತ್ವದಲ್ಲಿ ವಿವಾಹ ನಡೆಯುವ ಕಲ್ಯಾಣ ಮಂಟಪ ಸೇರಿ ಮದುವೆ ಸಮಾರಂಭಗಳಿಗೆ ಭೇಟಿ ನೀಡಿ ವಧು- ವರರ ವಯೋಮಿತಿಯ ಪರಿಶೀಲನೆಯೂ ನಡೆಯುತ್ತಿದೆ.

ನಗರದಲ್ಲಿ ಕಡಿಮೆ: ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸುವ ಸಂದರ್ಭದಲ್ಲಿಯೇ ಪೋಷಕರು ವಧು – ವರರ ವಯೋಮಿತಿಯ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಹಾಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಬಹುತೇಕನಿಯಂತ್ರಣಕ್ಕೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆದಿಲ್ಲ ಎಂದು ಹೇಳುತ್ತಾರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದಿಲೀಪ್‌.

ಬಾಲ್ಯ ವಿವಾಹದ ಬಗ್ಗೆ ಅರಿವು: ಜಿಲ್ಲಾಧಿಕಾರಿಯವ ಅಧ್ಯಕ್ಷತೆಯಲ್ಲಿ ನಿಗದಿತವಾಗಿ ಅಧಿಕಾರಿಗಳ ಸಭೆ ನಡೆಯುತ್ತದೆ. ಬಾಲ್ಯ ವಿವಾಹ ತಡೆಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ. ಆದರೂ ಬಾಲ್ಯ ವಿವಾಹಗಳು ಅಲ್ಲಲ್ಲಿ ನಡೆಯುತ್ತಿವೆ. ಪೋಷಕರಲ್ಲಿನ ಅಜ್ಞಾನ, ಹೆಣ್ಣು ಮಕ್ಕಳನ್ನು ಆದಷ್ಟೂ ಶೀಘ್ರ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳ ಬೇಕುಎಂಬಭಾವನೆಬಾಲ್ಯವಿವಾಹಕ್ಕೆಪ್ರಮುಖ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳುತ್ತಿದೆ. ಆದರೆ, ವಿದ್ಯಾವಂತರೂ ಇತ್ತೀಚಿನ ದಿನಗಳಲ್ಲಿ ಬಾಲಕಿಯನ್ನು ವಿವಾಹವಾಗುವ ಟ್ರೆಂಡ್‌ ಶುರುವಾಗಿದೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಹೆಣ್ಣುಗಳ ಕೊರತೆಯಿಂದಾಗಿ ಸುಶಿಕ್ಷಿತ ಗಂಡುಗಳೂ ಬಾಲಕಿಯರನ್ನು ವಿವಾಹವಾಗುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಸ್ವಯಂ ಸೇವಾ ಸಂಘಟನೆಗಳಿಂದ ಹೊರ ಬಿದ್ದಿದೆ.

Advertisement

ತಹಶೀಲ್ದಾರರು, ಸಮಾಜ ಕಲ್ಯಾಣ ಅಧಿಕಾರಿಗಳು, ಹಿಂದುಳಿದ ವರ್ಗಗಳಅಭಿವೃದ್ಧಿ ಅಧಿಕಾರಿಗಳು, ಪೊಲೀಸ್‌ ಇನ್‌ ಸ್ಪೆಕ್ಟರ್‌ಗಳು ಮಕ್ಕಳ ರಕ್ಷಣಾಧಿಕಾರಿಗಳಾಗಿ ಕೆಲಸ ಮಾಡುತ್ತಾರೆ. ಇವರ ಜೊತೆಗೆ ಅರೆ ನ್ಯಾಯಾಂಗ ಅಧಿಕಾರವುಳ್ಳ ಮಕ್ಕಳಕಲ್ಯಾಣಸಮಿತಿ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಬಾಲ್ಯ ವಿವಾಹ ತಡೆಗೆ ಕೆಲಸ ಮಾಡುತ್ತಿವೆ. ಈ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯ ವಿವಾಹ ನಡೆಯುವ ಸಂದರ್ಭದಲ್ಲಿ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸಲು ಮುಂದಾದಾಗ ಬಾಲ್ಯ ವಿವಾಹಕ್ಕೆ ಕಾರಣರಾದವರ ರಕ್ಷಣೆಗೆ ರಾಜಕೀಯ ಒತ್ತಡಗಳು ಎದುರಾಗುತ್ತಿವೆ.

ಅಧಿಕಾರಿಗಳನ್ನೇ ದಬಾಯಿಸಿದ್ರು :  ಇತ್ತೀಚೆಗೆ ಚನ್ನರಾಯಪಟ್ಟಣ ತಾಲೂಕು ಸಂತೆಶಿವರ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಡಿಪಿಒ ಸ್ಥಳಕ್ಕೆ ಹೋಗಿ ತಡೆದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ಸಿಡಿಪಿಒ ಮತ್ತು ಸಿಬ್ಬಂದಿಯನ್ನು ದಬಾಯಿಸಿ ಕಳುಹಿಸುವ ಪ್ರಯತ್ನ ನಡೆಸಿದ್ದರು. ಆನಂತರ ಬಾಲ್ಯ ವಿವಾಹ ನಿಷೇಧದ ಬಗ್ಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟ ನಂತರಅಲ್ಲಿ ವಿವಾಹ ನಡೆಯಲಿಲ್ಲ.

ಮಕ್ಕಳ ರಕ್ಷಣೆಗೆ 1098 ಸಹಾಯವಾಣಿ :  ಬಾಲ್ಯ ವಿವಾಹ ತಡೆಗೆ ಜನ ಜಾಗೃತಿಯೇ ಮದ್ದು. ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಶೋಷಣೆಯ ಬಗ್ಗೆ 1098 ಸಹಾಯವಾಣಿಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಿದೆ.

ಸಕಲೇಶಪುರ ತಾಲೂಕು ಜಮ್ಮನ ಹಳ್ಳಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ವಿವಾಹವಾಗಲಿದ್ದ ಬಾಲಕಿಯನ್ನು ರಕ್ಷಸಿದೆವು. ವಾರದ ಹಿಂದೆ ಸಕಲೇಶಪುರ ತಾಲೂಕು ಚಂಗಡಿಹಳ್ಳಿಯಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದೇವೆ. ಈ ಸಂಬಂಧ ಎಫ್ಐಆರ್‌ ದಾಖಲು ಮಾಡುತ್ತಿದ್ದೇವೆ. ಬಾಲ್ಯವಿವಾಹದಿಂದ ಬಚಾವಾದ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ವಯಸ್ಕರಾಗುವವರೆಗೆ ವಿವಾಹವಾಗದಂತೆಕಣ್ಗಾವಲಿಡುತ್ತಿದ್ದೇವೆ. ಈ ಸಂಬಂಧ 15 ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. -ದಿಲೀಪ್‌, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

 

-ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next