Advertisement
ಜಿಲ್ಲೆಯನ್ನು ಬಾಧಿಸುತ್ತಿದ್ದ ದೇವದಾಸಿ ಪದ್ಧತಿಗೆ ಬಹುತೇಕ ಕಡಿವಾಣ ಬಿದ್ದಿದೆ. ಆದರೆ, ಬಾಲ್ಯವಿವಾಹದಂಥ ಸಾಮಾಜಿಕಪಿಡುಗು ಮಾತ್ರ ಸಂಪೂರ್ಣ ಅಳಿದು ಹೋಗಿಲ್ಲ. ಅಕ್ಷರಜ್ಞಾನ ಇಲ್ಲದ, ತಿಳಿವಳಿಕೆ ಇಲ್ಲದ ಪಾಲಕರು ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ಈ ಕೆಟ್ಟ ಪದ್ಧತಿ ಮುಂದುವರಿಸುತ್ತಿದ್ದಾರೆ.
Related Articles
Advertisement
ಅಧಿಕಾರಿಗಳು ಹೆತ್ತವರನ್ನು ವಿಚಾರಿಸಿದರೆ, ಮನೆಯಲ್ಲಿ ಬಡತನ ಇದೆ. ಅವರನ್ನು ಸಾಕುವ ಯೋಗ್ಯತೆ ಇಲ್ಲ. ಮದುವೆ ಮಾಡಿದರೆ ಅವರಷ್ಟಕ್ಕೆ ಅವರು ದುಡಿದು ತಿನ್ನುತ್ತಾರೆ ಎಂಬ ಸಬೂಬು ನೀಡುತ್ತಾರೆ. ಇನ್ನು ಹಲವೆಡೆ ಮನೆಯಲ್ಲಿನ ವೃದ್ಧರ ಒತ್ತಾಯಕ್ಕೆ ಮಣಿದು, ಸಂಬಂಧಿ ಕರಲ್ಲೇ ಮದುವೆ ಮಾಡಲು ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ನಡೆದ ಬಹುತೇಕ ಮದುವೆಗಳು ಇಂಥದ್ದೇ ಕಾರಣಗಳಿಂದ ಘಟಿಸಿವೆ.
ಬಾಲಕಿಯರು ಕಲ್ಯಾಣ ಸಮಿತಿಗೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸರು ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಮದುವೆ ತಡೆದು ಮಕ್ಕಳನ್ನು ರಕ್ಷಿಸುತ್ತಿದ್ದಾರೆ. ಹಾಗೆ ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗುತ್ತಿದೆ. ಅಲ್ಲಿ ಅವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ಬಾಲಮಂದಿರಕ್ಕೆ ಕಳುಹಿಸಬೇಕೇ, ಮನೆಗೆ ಕಳುಹಿಸಬೇಕೇ ಎಂದು ನಿರ್ಧರಿಸಿ ಕ್ರಮ ಕೈಗೊಳ್ಳುತ್ತಾರೆ. ಅದರ ಜತೆಗೆ ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಲಾಗುತ್ತಿದೆ. ಈ ರೀತಿ ದಾಖಲಾದ ಬಹುತೇಕ ಹೆಣ್ಣುಮಕ್ಕಳು ನಮಗೆ ಓದುವ ಆಸೆಯಿದೆ. ಬೇಡ ಎಂದರೂ ಕೇಳದೆ ಮದುವೆ ಮಾಡಲು ಮುಂದಾದರು. ನಮಗೆ ಇಷ್ಟು ಬೇಗ ಮದುವೆ ಸುತಾರಾಂ ಇಷ್ಟ ಇಲ್ಲ ಎಂಬ ಅಭಿಪ್ರಾಯ ನೀಡಿದ್ದಾಗಿ ತಿಳಿಸುತ್ತಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ ಇಂದಿಗೂ ಸಾಕಷ್ಟು ಕಡೆ ಬಾಲ್ಯವಿವಾಹಗಳು ನಡೆಯುತ್ತಿರುವ ದೂರುಗಳು ಬರುತ್ತಿವೆ. ತಕ್ಷಣಕ್ಕೆ ದಾಳಿ ನಡೆಸುವ ಮೂಲಕ ತಡೆಯುತ್ತಿದ್ದೇವೆ. ಹೆತ್ತವರಲ್ಲಿ ತಿಳಿವಳಿಕೆ ಕೊರತೆ, ಬಡತನ, ಮನೆಯಲ್ಲಿನ ಹಿರಿಯರ ಒತ್ತಡಗಳೇ ಇದಕ್ಕೆ ಕಾರಣ. ಬಾಲ್ಯವಿವಾಹದಲ್ಲಿ ಬಾಲಕಿಯರೇ ಹೆಚ್ಚಾಗಿ ಗುರಿಯಾಗುತ್ತಾರೆ. ಒಂದು ಪ್ರಕರಣದಲ್ಲಿ ಮಾತ್ರ 20 ವರ್ಷದ ಬಾಲಕನಿಗೆ ಮದುವೆ ಮಾಡಲಾಗಿತ್ತು. ಜಾಗೃತಿ ಮೂಡಿಸುವ ಕೆಲಸ ನಿರಂತರ ಸಾಗಿದೆ. – ಅಹ್ಮದ್ ಮನ್ಸೂರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
-ಸಿದ್ಧಯ್ಯಸ್ವಾಮಿ ಕುಕುನೂರು