Advertisement

ಮಕ್ಕಳ ಅಪಹರಣ: ವದಂತಿಗೆ ಕಿವಿಗೊಡದಂತೆ ಪೊಲೀಸರ ಮನವಿ

11:48 AM Jul 29, 2019 | keerthan |

ಉಡುಪಿ: ಅಪರಾಧಕ್ಕಿಂತ ಅಪರಾಧಗಳ ಬಗ್ಗೆ ವದಂತಿ, ಸುಳ್ಳು ನಿಯಂತ್ರಣವೇ ಪೊಲೀಸರಿಗೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದೆ. ದೇಶದಲ್ಲಿ ಕೆಲವು ಘಟನೆಗಳು ನಡೆದಾಗ ವಿಘ್ನ ಸಂತೋಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಸೃಷ್ಟಿಸಿ ಆತಂಕ ಮೂಡಿಸುತ್ತವೆ.

Advertisement

ಮಕ್ಕಳ ಅಪಹರಣ ಜಾಲ ಸಕ್ರಿಯವಾಗಿದೆ ಮತ್ತು ಅಪಹರಣವಾಗುತ್ತಿದೆ ಎಂಬ ವದಂತಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರವಾನೆಯಾಗುತ್ತಿದ್ದು, ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಸಾರ್ವಜನಿಕರಿಗೆ ಕೆಲವು ಸೂಚನೆ ನೀಡಲಾಗಿದೆ.

ಮಕ್ಕಳ ಕಳ್ಳರ ಬಗ್ಗೆ ಕೆಲವು ನಕಲಿ ಫೋಟೋಗಳನ್ನು ಹಾಕಿ, ಎಲ್ಲಿಯೋ ನಡೆದ ಘಟನೆಯನ್ನು ನಮ್ಮೂರಿನದ್ದು ಎಂಬಂತೆ ಬಿಂಬಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣ ಬಗ್ಗೆ ಸಂದೇಶಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದು, ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡಿರುವ ನಿದರ್ಶನಗಳಿವೆ.

ಮಾಹಿತಿ ನೀಡಿ
ಮಕ್ಕಳ ಅಪಹರಣಕ್ಕೆ ಸಂಬಂಧಿಸಿ ಯಾವುದೇ ಪ್ರದೇಶ, ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್‌ ಕಂಟ್ರೋಲ್‌ ರೂಮ್‌ ಹಾಗೂ ಹತ್ತಿರದ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಿ. ಅಪರಿಚಿತರ ಮೇಲೆ ಹಲ್ಲೆ, ಕೊಲೆಯತ್ನದಂತಹ ಕೃತ್ಯಗಳಿಗೆ ನಾಗರಿಕರು ಮುಂದಾಗಬಾರದು. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಅಂತಹ ವ್ಯಕ್ತಿಗಳ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು.

ಸ್ವಯಂಪ್ರೇರಿತ ದೂರು
ಮಕ್ಕಳ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಾಗೃತಿ ಕಾರ್ಯಕ್ರಮ
ಪೊಲೀಸ್‌ ಇಲಾಖೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಇಂತಹ ಅನುಮಾನಾಸ್ಪದ ವಿಚಾರಗಳು ಕಂಡು ಬಂದಾಗ ಬೀಟ್‌ ಸಿಬಂದಿ, ಪೊಲೀಸ್‌ ಠಾಣೆ ಅಥವಾ ಜಿಲ್ಲೆ ಕಂಟ್ರೋಲ್‌ ರೂಮ್‌ ಫೋನ್‌ ನಂಬರ್‌ 0820-2526444 ಅಥವಾ 100ಕ್ಕೆ ಮಾಹಿತಿ ನೀಡುವುದು ಅಗತ್ಯ.

ವಿಶೇಷ ಮುತುವರ್ಜಿ
ಮಕ್ಕಳ ಹಕ್ಕುಗಳ ವಿಚಾರದಲ್ಲಿ ಪೊಲೀಸ್‌ ಇಲಾಖೆ ವಿಶೇಷ ಮುತುವರ್ಜಿ ವಹಿಸಿದೆ. ಒಂದು ವೇಳೆ ಇಂತಹ ಘಟನೆಗಳು ನಡೆದಲ್ಲಿ ಕೂಡಲೇ ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಲು ನಾಗರಿಕರ ಜತೆ ಪೊಲೀಸ್‌ ಇಲಾಖೆ ಸದಾ ಸಿದ್ಧವಿದೆ. ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲೆ ಪೊಲೀಸ್‌ ಕಂಟ್ರೋಲ್‌ ರೂಮ್‌ ನಂಬ್ರ 0820-2526444 / 100 ಅಥವಾ ಸೈಬರ್‌ ಅಪರಾಧ ಪೊಲೀಸ್‌ ಠಾಣೆ ಉಡುಪಿ 0820-2530021ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next