ನವದೆಹಲಿ: 2020ರಲ್ಲಿ ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಆತಂಕಕಾರಿ ಮಾಹಿತಿಯೊಂದನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿದೆ. ಇವರೆಲ್ಲರೂ 18 ವರ್ಷದೊಳಗಿನವರು ಎಂದು ಹೇಳಲಾಗಿದೆ.
ಇದನ್ನು ವಿಶ್ಲೇಷಿಸಿರುವ ಮಕ್ಕಳ ಮಾನಸಿಕ ತಜ್ಞರು, ಕೊರೊನಾ ಲಾಕ್‌ಡೌನ್‌ನಿಂದ ಶಾಲೆಗಳು ಮುಚ್ಚಿದ್ದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿರುವ ಸಾಧ್ಯತೆಗಳಿವೆ.
ಶಾಲೆಗಳು ಮುಚ್ಚಿದ್ದರಿಂದಾಗಿ ಏರ್ಪಟ್ಟ ಏಕಾಂಗಿತನ, ಖನ್ನತೆ ಮುಂತಾದ ಮಾನಸಿಕ ಒತ್ತಡದಿಂದ ಮಕ್ಕಳು ಸಾವಿಗೀಡಾಗಿರಬಹುದು ಎಂದು ಅಂದಾಜಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, 2020ರಲ್ಲಿ 11,396 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. 2019ರಲ್ಲಿ 9,613 ಮಕ್ಕಳು, 2018ರಲ್ಲಿ 9,413 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಇದನ್ನೂ ಓದಿ : ಬಸವನಾಡಿನ ನಡೆದಾಡುವ ವಿಶ್ವವಿದ್ಯಾಲಯ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿ
ಕಳೆದ ವರ್ಷ ಆತ್ಮಹತ್ಯೆ ಮಾಡಿ ಕೊಂಡ ಮಕ್ಕಳಲ್ಲಿ ಹೆಚ್ಚಿನವರು (4,006) ಕೌಟುಂಬಿಕ ಸಮಸ್ಯೆಗಳಿಂದ ರೋಸಿಹೋಗಿದ್ದವರು, 1,337 ಮಕ್ಕಳು ಪ್ರೇಮವೈಫಲ್ಯಕ್ಕೊಳಗಾದವರು ಹಾಗೂ 1,327 ಮಕ್ಕಳು ಕಾಯಿಲೆಗಳಿಂದ ನರಳುತ್ತಿದ್ದವರು ಎಂದು ದತ್ತಾಂಶಗಳಲ್ಲಿ ಉಲ್ಲೇಖೀಸಲಾಗಿದೆ.