ಸರ್ಜಾಪುರ: ಗರ್ಭಿಣಿಯೊಬ್ಬರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಪ್ರಸವಕ್ಕೂ ಮುನ್ನವೇ ಶಿಶು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಮಗುವಿನ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಸ್ಥಳೀಯ ನಾಗರಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಘಟನೆ ಸಂಬಂಧ ಆರೋಗ್ಯ ಸಚಿವರಿಗೆ ದೂರು ನೀಡಲು ಸ್ಥಳೀಯ ಗ್ರಾ.ಪಂ ಸದಸ್ಯರು ನಿರ್ಧರಿಸಿದ್ದಾರೆ.
ಕಳೆದ ಗುರುವಾರ ದೊಮ್ಮಸಂದ್ರ ಗ್ರಾಮದ ನೇತ್ರಾವತಿ ಎಂಬ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಶುಶ್ರೂಶಕಿಯರಾದ ಮಲಾ ಮತ್ತು ದೀಪಾ ಸಾಮಾನ್ಯ ಹೆರಿಗೆಯಾಗಲಿದೆ ಎಂದು ನೇತ್ರಾವತಿಗೆ ತಿಳಿಸಿದ್ದರು.
ಆದರೆ ಶುಕ್ರವಾರ ಬೆಳಿಗ್ಗೆ ದಿಢೀರನೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೇತ್ರಾವತಿಯವನ್ನು ಪಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ನೇತ್ರಾವತಿಯವರನ್ನು ಪರೀಕ್ಷಿಸಿದ ವೈದ್ಯರು, ಮಗು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಗರ್ಭಿಣಿಯ ಆರೋಗ್ಯದ ದೃಷ್ಟಿಯಿಂದ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು ಮಗುವನ್ನು ಹೊರತೆಗೆದಿದ್ದರು. ಸದ್ಯ ನೇತ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿದ ನೇತ್ರಾವತಿ ಸಂಬಂಧಿಗಳು ಗ್ರಾ.ಪಂ.ಸದಸ್ಯ ಧನರಾಜು ಮತ್ತು ಜಯದೇವ ನೇತೃತ್ವದಲ್ಲಿ ಶನಿವಾರ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ನಂತರ ಗ್ರಾ.ಪಂ.ಅಧ್ಯಕ್ಷ ಉಮೇಶಬಾಬು ಮತ್ತು ಆನೇಕಲ್ ಆರೋಗ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಘಟನೆ ಬಗ್ಗೆ ಆರೋಗ್ಯ ಸಚಿವರಿಗೆ ದೂರು ನೀಡಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ನಿರ್ಧರಿಸಿದ್ದಾರೆ.