ಮಂಗಳೂರು: ಹಗಲು ಹೊತ್ತಿನಲ್ಲಿ ಮನೆಯೊಳಗಿನ ಬೆಡ್‌ರೂಂನಲ್ಲಿ ಹಾಯಾಗಿ ಮಲಗಿದ್ದ 12 ವರ್ಷದ ಮಗುವೊಂದನ್ನು ಎಬ್ಬಿಸಲು ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬಂದಿ ತೆರಳಿದ ಘಟನೆ ಮಂಗಳೂರಿನ ಬಿಜೈ ಚರ್ಚ್ ರಸ್ತೆಯ ಅಭಿಮಾನ್ ಮ್ಯಾನ್ಶನ್ ಅಪಾರ್ಪ್‌ಮೆಂಟ್‌ನಲ್ಲಿ ಗುರುವಾರ ಸಂಭವಿಸಿದೆ.
ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಾಳಿಗೆಯ 404 ನಂಬ್ರದ ಮನೆಯಲ್ಲಿ ಮಲಗಿದ್ದ ಟಿ.ವಿ. ರವೀಂದ್ರ ಕುಮಾರ್ ಅವರ ಪುತ್ರಿ ಪ್ರಶಂಸ (12) ಳನ್ನು ನಗರದ ಕದ್ರಿ ಮತ್ತು ಪಾಂಡೇಶ್ವರ ಅಗ್ನಿ ಶಾಮಕ ಠಾಣೆಗಳ ಸಿಬಂದಿ ಇಲಾಖೆಯ ಅತ್ಯಾಧುನಿಕ ಏರಿಯಲ್ ಲ್ಯಾಡರ್ ಪ್ಲಾಟ್‌ಫೋರಂ (ಎ.ಎಲ್.ಪಿ.) ಯಂತ್ರ ಉಪಯೋಗಿಸಿ ಫ್ಲಾಟಿನ ಬಾಲ್ಕನಿಯ ಡೋರ್ ಮೂಲಕ ಒಳ ಪ್ರವೇಶಿಸಿ ಎಬ್ಬಿಸಿ ತಂದೆ- ತಾಯಿಯ ಮಡಿಲಿಗೆ ಒಪ್ಪಿಸಿದರು.
ಘಟನೆಯ ವಿವರ: ಟಿ.ವಿ.ರವೀಂದ್ರ ಕುಮಾರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿದ್ದು, ಅವರ ಪತ್ನಿ ಕೂಡಾ ಕೆಲಸಕ್ಕೆ ಹೋಗುತ್ತಾರೆ. ಪುತ್ರಿ ಪ್ರಶಂಸಾ ಶಾಲೆಗೆ ಹೋಗುತ್ತಿದ್ದಾಳೆ. ಗುರುವಾರ ಸಂಜೆ ತಾಯಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಪುತ್ರಿ ಪ್ರಶಂಸ ಬಾಗಿಲು ಮುಚ್ಚಿ ಬೆಡ್‌ರೂಂನಲ್ಲಿ ಮಲಗಿ ನಿದ್ದೆಗೆ ಜಾರಿದ್ದಳು. ಸಂಜೆ 5 ಗಂಟೆ ವೇಳೆಗೆ ತಾಯಿ ವಾಪಸ್ ಬಂದಾಗ ಮನೆಯ ಮುಖ್ಯ ದ್ವಾರಕ್ಕೆ ಒಳಗಿನಿಂದ ಚಿಲಕ ಹಾಕಲಾಗಿತ್ತು.
ಎಷ್ಟು ಬೆಲ್ ಮಾಡಿದರೂ, ಎಷ್ಟೆ ಕೂಗಿ ಕರೆದರೂ ಮಗುವಿಗೆ ಎಚ್ಚರವಾಗಿರಲಿಲ್ಲ. ಇದರಿಂದ ತಾಯಿ ಗಾಬರಿಗೊಂಡಿದ್ದು, ಕೊನೆಗೆ ಪಕ್ಕದ ಫ್ಲಾಟ್‌ನಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿ ವಿನಯ್ ಗಾಂವ್‌ಕರ್ ವಿಷಯ ತಿಳಿದು ಅವರು ಅಗ್ನಿ ಶಾಮಕ ದಳದ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
5.35 ಕ್ಕೆ ಕದ್ರಿ ಅಗ್ನಿ ಶಾಮಕ ಠಾಣೆಗೆ ಮಾಹಿತಿ ಲಭಿಸಿದ್ದು, ಹತ್ತು ನಿಮಿಷದಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕೆ ತಲುಪಿದ್ದರು. ಮಗು ನಾಲ್ಕನೇ ಮಾಳಿಗೆಯಲ್ಲಿದ್ದು , ಐದನೇ ಮಾಳಿಗೆಯ ಮನೆಯಲ್ಲಿ ಯಾರೂ ಇಲ್ಲದ ಕಾರಣ ಹಾಗೂ ಲಾಕ್ ಮಾಡಿದ್ದರಿಂದ ನಾಲ್ಕನೇ ಮಾಳಿಗೆಗೆ ಹೋಗಲು ಅಗ್ನಿ ಶಾಮಕ ದಳದವರು ಎಎಲ್‌ಪಿ ವಾಹನವನ್ನು ಪಾಂಡೇಶ್ವರ ಠಾಣೆಯಿಂದ ತರಿಸಿದ್ದರು.
ಅದರ ಮೂಲಕ ನಾಲ್ಕನೇ ಮಾಳಿಗೆಯ 404 ನೇ ಫ್ಲಾಟ್‌ನ ಬಾಲ್ಕನಿಗೆ ಹತ್ತಿದಾಗ ಅಲ್ಲಿ ಬಾಗಿಲು ತೆರೆದೇ ಇತ್ತು. ಹಾಗೆ ಅವರು ಮನೆಯ ಒಳಗೆ ತೆರಳಿ ಮಲಗಿದ್ದ ಮಗುವನ್ನು ಎಬ್ಬಿಸಿದರು. ಬಳಿಕ ಮುಖ್ಯ ದ್ವಾರದ ಬಾಗಿಲಿನ ಒಳಗಿನ ಚಿಲಕವನ್ನು ತೆಗೆದು ಬಾಗಿಲು ತೆರೆದರು. ಮಂಗಳೂರು ವಿಭಾಗದ ಚೀಫ್ ಫೈರ್ ಆಫೀಸರ್
ಟಿ.ಎನ್. ಶಿವ ಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ದಳದ ನಾಲ್ಕು ಮಂದಿ ಅಧಿಕಾರಿಗಳು ಮತ್ತು 15 ಜನ ಸಿಬಂದಿ ಭಾಗವಹಿಸಿದ್ದರು. ಒಟ್ಟು 20 ನಿಮಿಷದಲ್ಲಿ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು. ಅಗ್ನಿ ಶಾಮಕ ದಳದ ಎ.ಎಲ್.ಪಿ. ಯಂತ್ರೋಪಕರಣ 10 ಮಹಡಿ ತನಕವೂ ಕಾರ್ಯಾಚರಣೆ ನಡೆಸುವ ಸಾಮರ್ಥಯವನ್ನು ಹೊಂದಿದೆ.