ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಹೊಸ ಕಲಾವಿದರು, ತಂತ್ರಜ್ಞರು ಅಡಿಯಿಡುತ್ತಲೇ ಇರುತ್ತಾರೆ. ಆದರೆ ಹೀಗೆ ಅಡಿಯಿಡುವವರಲ್ಲಿ ಬಾಲ ಪ್ರತಿಭೆಗಳ ಸಂಖ್ಯೆ ತೀರಾ ಕಡಿಮೆ. ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ಸ್, ವಿಲನ್ಸ್, ಕಾಮಿಡಿಯನ್ಸ್ ಗಳಂತೆ ಬಾಲ ಕಲಾವಿದರನ್ನೂ ಅನೇಕ ಸಿನಿಮಾಗಳಲ್ಲಿ ಪರಭಾಷೆಯಿಂದ ಕರೆತರಲಾಗುತ್ತದೆ. ಇವೆಲ್ಲದರ ನಡುವೆ ಕನ್ನಡದ ಬಾಲ ಕಲಾವಿದೆಯೊಬ್ಬಳು ಸದ್ದಿಲ್ಲದೆ ಚಂದನವನದಲ್ಲಿ ತೆರೆಮುಂದೆ ಮತ್ತು ತೆರೆಹಿಂದೆ ತನ್ನ ಕೆಲಸಗಳಿಂದ ಗಮನ ಸೆಳೆಯುತ್ತಿದ್ದಾಳೆ. ಆ ಪೋರಿಯ ಹೆಸರು ಭೈರವಿ.
ನೆಲಮಂಗಲ ತಾಲೂಕಿನ ಗಡಿಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಎಂ.ಭೈರವಿ, ಬಸವನಹಳ್ಳಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ಜೊತೆಗೆ, ತಂದೆ ಮಹೇಶ್‌ರವರ ಪರಿಶ್ರಮದಿಂದ ಕಲೆ, ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡುವ ಕನಸು ಕಾಣುತ್ತಿದ್ದಾಳೆ.
ಸದ್ಯ 6ನೇ ತರಗತಿ ಓದುತ್ತಿರುವ ಭೈರವಿ ಕ್ರೀಡೆ, ಸಿನಿಮಾ ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿದ್ದಾಳೆ. ಈಗಾಗಲೇ ಜಿ.ಎಸ್.ಕಲೀಗೌಡ ನಿರ್ದೇಶನದ “ತನಿಖೆ’, ಮಧುಚಂದ್ರ ನಿರ್ದೇಶನದ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಈರಣ್ಣ ನಿರ್ದೇಶನದ “ಸಾಧನೆ ಶಿಖರ’, “ರಂಗಸಮುದ್ರ’ ಮತ್ತು ಹುಲುಕುಂಟೆ ನಾಗರಾಜು ನಿರ್ದೇಶನದ “ಬೆಟ್ಟದಟ್ಟಿ ಭೈರವಿ’, “ಹೀಗೇಕೆ’ ಮತ್ತು ನಾಗೇಶ್ ನಿರ್ದೇಶನದ “ಪ್ರೇಮಾತ್ಮ-2′ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಭೈರವಿ, ಪ್ರತಿಭೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ. ಸಿನಿಮಾದಾಚೆಗೂ ಭೈರವಿ ತನ್ನ ಪ್ರತಿಭೆ ಮೆರೆದಿದ್ದಾಳೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಕರಾಟೆ, ನೃತ್ಯ, ಛದ್ಮಾವೇಷ, ಇಂಗ್ಲೀಷ್, ಕನ್ನಡ ಕಂಠಪಾಠ, ಜನಪದ ನೃತ್ಯ, ಡಬ್‌ಸ್ಮ್ಯಾಶ್ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿ, ಅನೇಕ ಬಹುಮಾನಗಳನ್ನು ಪಡೆದಿದ್ದಾಳೆ.
ಇದನ್ನೂ ಓದಿ:ಹೊರಬಂತು ‘ಒಂಬತ್ತನೇ ದಿಕ್ಕು’ ಟ್ರೇಲರ್: ಹೊಸ ದಿಕ್ಕಿನತ್ತ ಯೋಗಿ ಚಿತ್ತ
ಕರಾಟೆಯಲ್ಲಿ ಬ್ರೋನ್ ಬೆಲ್ಟ್ ಪಡೆದು ರಾಜ್ಯಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಸ್ಥಾನ ಪಡೆದಿದ್ದಾಳೆ. ಇದರ ಜೊತೆಗೆ ಭರತನಾಟ್ಯ, ವೆಸ್ಟರ್ನ್ ಡ್ಯಾನ್ಸ್, ಸ್ಕೇಟಿಂಗ್‌ನಲ್ಲೂ ಭೈರವಿ ಎತ್ತಿದ ಕೈ. ಈ ಎಲ್ಲಾ ವಿಭಾಗಗಳಲ್ಲಿ ಭೈರವಿ, ಬೆಂಗಳೂರು ಸುತ್ತಮುತ್ತ ತಮ್ಮ ಪ್ರತಿಭಾ ಪ್ರದರ್ಶನ ನೀಡಿದ್ದಾಳೆ. ಇಷ್ಟು ವರ್ಷಗಳಲ್ಲಿ ತಾನು ನಟಿಸಿದ ಸಿನಿಮಾದಿಂದ ಬಂದ ಸಂಭಾವನೆಯ ದುಡ್ಡನ್ನು ಭೈರವಿ ತನ್ನ ವೈಯಕ್ತಿಕ ಖರ್ಚಿಗೆ ಬಳಸಿಲ್ಲ. ಬದಲಿಗೆ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾಳೆ.
ಭೈರವಿಯ ತಂದೆ ತಾಯಿ, ಆಕೆಯ ಸಂಪಾದನೆಯ ಹಣವನ್ನು ಅನಾಥ ಮಕ್ಕಳಿಗೆ, ವೃದ್ಧರಿಗೆ ಮತ್ತು ಸರ್ಕಾರಿ ಶಾಲೆಗಳಿಗೆ ನೀಡುತ್ತಾ ಬಂದಿದ್ದಾರೆ.