ಗುರುಮಠಕಲ್: ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಸೂಕ್ತ ರಕ್ಷಣೆ ಬೇಕಾಗಿದೆ. ಮಕ್ಕಳ ರಕ್ಷಣೆ ಬಗ್ಗೆ ಹೆಚ್ಚಿನ ಗಮನ ನೀಡುವುದು ಪೋಷಕರ ಜವಾಬ್ದಾರಿ ಎಂದು ತಹಶೀಲ್ದಾರ್ ಶರಣಬಸವ ಹೇಳಿದರು.
ಪಟ್ಟಣದ ಆಟೋ ನಿಲ್ದಾಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ರಕ್ಷಣೆ ಕುರಿತ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಾವುದೇ ಸಮಸ್ಯೆಗಳಿದ್ದರೆ 1098ಕ್ಕೆ ಕರೆ ಮಾಡಿ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರಕ ಪರಿಹಾರ ಒದಗಿಸಲಾಗುವುದು ಎಂದರು.
ಎಲ್ಲ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಹಿಂಸೆ, ಅತ್ಯಾಚಾರದಂತಹ ಪ್ರಕರಣಗಳು ಫೋಕ್ಸೊ ಕಾಯ್ದೆಯಡಿ ಬರುತ್ತವೆ. ಮಕ್ಕಳು ಸಹ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ ವಿದ್ಯಾಭ್ಯಾಸದತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಈ ವೇಳೆ ಪೊಲೀಸ್ ಇನ್ಸ್‌ಸ್ಪೆಕ್ಟರ್ ಖಾಜಾಹುಸೇನ್, ಸಿಡಿಪಿಒ ಭೀಮರಾಯ, ಡಿಸಿಪಿಒ ಸಿಬ್ಬಂದಿ ದೇವಪ್ಪ ಗಿರಿಗಿರಿ, ಸಾಬಯ್ಯ, ಮಕ್ಕಳ ಸಹಾಯವಾಣಿ ಸಿಬ್ಬಂದಿ ರೇಣುಕಾ, ನಾರಾಯಣ ಮಜ್ಜಿಗೆ ಸೇರಿದಂತೆ ಇತರರಿದ್ದರು.