Advertisement

ಚಿಕೂನ್‌ ಗುನ್ಯಾ-ಡೆಂಘೀ ಜಾಗೃತಿ ಕಾರ್ಯಕ್ರಮ

06:59 PM Aug 19, 2020 | Suhan S |

ಚಿತ್ರದುರ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮದಕರಿಪುರದಲ್ಲಿ ಹಮ್ಮಿಕೊಂಡಿದ್ದ ಚಿಕೂನ್‌ಗುನ್ಯಾ ನಿಯಂತ್ರಣ ಹಾಗೂ ಡೆಂಘೀ ರೋಗಗಳ ಕುರಿತ ಜನ ಜಾಗೃತಿ ಕಾರ್ಯಕ್ರಮಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಟಿ. ಯೋಗೇಶ್‌ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ನೀರಿನ ಸಂಗ್ರಹಣೆಯಲ್ಲಿ ಸೊಳ್ಳೆಮರಿಗಳು ಉತ್ಪತ್ತಿಯಾಗದಂತೆ ಚೆನ್ನಾಗಿ ತೊಟ್ಟಿಗಳನ್ನು, ಡ್ರಂಗಳನ್ನು ಉಜ್ಜಿ ತೊಳೆದು ನೀರನ್ನು ಮುಚ್ಚಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಪ್ರಸನ್ನ ಮಾತನಾಡಿ, ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮ ಪಂಚಾಯತಿ ಸಿಬ್ಬಂದಿ ಪ್ರತಿ ದಿನ ಗ್ರಾಮಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜಯಮ್ಮ ಮಾತನಾಡಿ, 2020-21 ನೇ ಸಾಲಿನಲ್ಲಿ ಡೆಂಘೀ 127 ಪ್ರಕರಣ ಹಾಗೂ ಚಿಕೂನ್‌ಗುನ್ಯಾ 54 ಪ್ರಕರಣಗಳು ಮತ್ತು ಮಲೇರಿಯಾ 2 ಪ್ರಕರಣಗಳು ಕಂಡುಬಂದಿವೆ ಎಂದರು. ಕೀಟ ತಜ್ಞೆ ನಂದಿನಿ ಕಡಿ ಮಾತನಾಡಿ, ಸೊಳ್ಳೆ ಮರಿಗಳು ಉತ್ಪತ್ತಿಯಾಗದಂತೆ ಚೆನ್ನಾಗಿ ಡ್ರಾಂಗಳನ್ನು, ತೊಟ್ಟಿಗಳನ್ನು ಉಜ್ಜಿ ತೊಳೆದು ನೀರನ್ನು ಮಚ್ಚಿಟ್ಟುಕೊಳ್ಳಬೇಕು. ಮಳೆಗಾಲ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಸೊಳ್ಳೆಗಳ ಸಾಂದ್ರತೆ ಹೆಚ್ಚಾಗುವ ಸಂಭವವಿದ್ದು, ಡೆಂಘೀ ಪ್ರಕರಣ ಹೆಚ್ಚಾಗಬಹುದು. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ. ಕೃಷ್ಣ ನಾಯ್ಕ, ಉಪ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಎಚ್‌. ಎಸ್‌. ಆನಂದಪ್ಪ, ಪಿಡಿಒ ಸುಷ್ಮಾರಾಣಿ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಹಿರಿಯ ಆರೋಗ್ಯ ಸಹಾಯಕ ರುದ್ರಮುನಿ ಹಾಗೂ ಕಿರಿಯ ಮಹಿಳಾ ಅರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next