Advertisement

ಕಳಪೆ ಸಾಧನೆ ಮೆಟ್ಟಿ ನಿಲ್ಲುವ ನಿರೀಕ್ಷೆ

03:10 PM Feb 28, 2020 | Naveen |

ಚಿಕ್ಕೋಡಿ: ಪಿಯುಸಿ ದ್ವಿತೀಯ ಪರೀಕ್ಷಾ ಫಲಿತಾಂಶದಲ್ಲಿ ಕಳೆದೆರಡು ವರ್ಷಗಳಲ್ಲಿ ಕಳಪೆ ಮಟ್ಟದ ಸಾಧನೆ ಮಾಡಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಈ ವರ್ಷ ಉತ್ತಮ ಫಲಿತಾಂಶದ ಭರವಸೆಯಲ್ಲಿ ಪರೀಕ್ಷೆಗೆ ಸಜ್ಜಾಗುತ್ತಿದೆ.

Advertisement

ಬರುವ ಮಾ. 4ರಿಂದ ಪಿಯುಸಿ ದ್ವಿತೀಯ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಪಾರದರ್ಶಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಶೈಕ್ಷಣಿಕ ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆರಂಭವಾಗಿ ನಾಲ್ಕು ವರ್ಷ ಕಳೆದಿದ್ದು, ಕಚೇರಿ ಆರಂಭವಾದಾಗಿನಿಂದ ಈಗ ಮೂರನೇ ಪರೀಕ್ಷೆ ನಡೆಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಉಪನಿರ್ದೇಶಕರು ಎಲ್ಲ ಕಾಲೇಜಿನ ಪ್ರಾಂಶುಪಾಲರ ಸಭೆ ಕರೆದು ಪಾರದರ್ಶಕ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಸಕ್ತ ವರ್ಷ 28,596 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 16,099 ವಿದ್ಯಾರ್ಥಿಗಳು ಮತ್ತು 12,497 ವಿದ್ಯಾರ್ಥಿನಿಯರು ಇದ್ದಾರೆ. ಇಡೀ ಶೈಕ್ಷಣಿಕ ಜಿಲ್ಲೆಯಲ್ಲಿ 45 ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಕಲಾ ವಿಭಾಗದಲ್ಲಿ 13,424 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 8,257, ವಿಜ್ಞಾನ ವಿಭಾಗದಲ್ಲಿ 6,915 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಕಳೆದೆರಡು ವರ್ಷಗಳಿಂದ ಕಳಪೆ ಫಲಿತಾಂಶ ಬಂದಿರುವುದರಿಂದ ಈ ವರ್ಷ 3,910 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 23,385 ಹೊಸ ವಿದ್ಯಾರ್ಥಿಗಳು. 1301 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 6,487 ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು, 7,736 ಅನುದಾನಿತ ಕಾಲೇಜು ಹಾಗೂ 11,438 ವಿದ್ಯಾರ್ಥಿಗಳು ಅನುದಾನ ರಹಿತ ಕಾಲೇಜಿನವರಾಗಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಹುಕ್ಕೇರಿ, ಗೋಕಾಕ ಮತ್ತು ಮೂಡಲಗಿ ತಾಲೂಕುಗಳನ್ನು ಒಳಗೊಂಡ ಒಟ್ಟು ಎಂಟು ತಾಲೂಕಿನ ಮಕ್ಕಳು ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವ್ಯಾಪ್ತಿಗೆ ಬರುವುದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಮಾದರಿಯಲ್ಲಿಯೇ ಪಿಯು ದ್ವಿತೀಯ ಪರೀಕ್ಷೆ ಫಲಿತಾಂಶದಲ್ಲಿ ಸಾಧನೆ ಮಾಡಲು ಇಲಾಖೆ ದಿಟ್ಟ ಕ್ರಮ ಕೈಗೊಂಡಿದೆ.

Advertisement

ಫಲಿತಾಂಶ ಸುಧಾರಣಾ ಕ್ರಮಗಳು: ಪ್ರತಿ ತಿಂಗಳಿಗೊಮ್ಮೆ ಪ್ರಾಚಾರ್ಯರ ಸಭೆ ನಡೆಸಿ ಪರೀಕ್ಷೆ ಸಿದ್ಧತೆ ಕುರಿತು ಚರ್ಚೆ ಮಾಡಲಾಗಿದೆ. ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿರುವುದು. ಮೂರು ಸರಣಿ ಪರೀಕ್ಷೆ ನಡೆಸಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದು. ಕಳೆದ ನಾಲ್ಕೈದು ವರ್ಷದ ಪ್ರಶ್ನೆ ಪತ್ರಿಕೆ ಬಿಡಿಸುವುದು. ಕಾಲೇಜಿನಲ್ಲಿ ಒಂದು ಅವ ಧಿಯಲ್ಲಿ ಗುಂಪು ಚರ್ಚೆ ನಡೆಸಿರುವುದು. ಎರಡು ತಿಂಗಳಿಗೊಮ್ಮೆ ಹೆಚ್ಚುವರಿ ತರಗತಿ ನಡೆಸಿ ಮಕ್ಕಳಲ್ಲಿನ ಪರೀಕ್ಷಾ ಭಯ ನಿವಾರಿಸುವ ಕ್ರಮ ಕೈಗೊಳ್ಳುವ ಮೂಲಕ ಆಯಾ ವಿಭಾಗದ ಉಪನ್ಯಾಸಕರಿಗೆ ಶಿಕ್ಷಣ ಇಲಾಖೆ ತರಬೇತಿ ನೀಡಿದೆ.

ಪಾರದರ್ಶಕ ಪರೀಕ್ಷೆ ನಡೆಸಲು ಸಿದ್ಧತೆ: ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಮೊದಲು ಒಬ್ಬರೆ ಉಪನಿರ್ದೇಶಕರು ಇರುತ್ತಿದ್ದರು. ಆದರೆ ಪ್ರತಿ ವರ್ಷ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಹಾಗೂ ಭೌಗೋಳಿಕ ದೃಷ್ಟಿಯಿಂದ ಚಿಕ್ಕೋಡಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮಂಜೂರಾಗಿದೆ. ಇದರಿಂದ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮಕ್ಕಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಬೇಕು. ಸ್ವಲ್ಪ ತಡವಾದರೂ ಅಂಥ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹಾಗೂ ಪರೀಕ್ಷೆ ಸೇವೆಯಲ್ಲಿರುವ ಎಲ್ಲರಿಗೂ ಮೊಬೈಲ್‌ ನಿಷೇಧ ಮಾಡಲಾಗಿದೆ. ಗುಂಪು ನಕಲು ತಡೆಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ಈ ಬಾರಿ ಗುಣಮಟ್ಟದ ಉತ್ತರ ಪತ್ರಿಕೆ ಲಭ್ಯವಾಗಲಿವೆ. 40 ಪುಟಗಳ ಉತ್ತರ ಪತ್ರಿಕೆಯನ್ನು ಇಲಾಖೆ ನೀಡಲಿದೆ ಎನ್ನುತ್ತಾರೆ ಉಪನಿರ್ದೇಶಕರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪಿಯು ಉಪನಿರ್ದೇಶಕರ ಕಚೇರಿ ಆರಂಭವಾದಾಗಿನಿಂದ ಇದು ಮೂರನೇ ಪರೀಕ್ಷೆ ಜರುಗಲಿದ್ದು, ಈ ವರ್ಷ ಉತ್ತಮ ಫಲಿತಾಂಶ ದಾಖಲಿಸಬೇಕೆಂದು ಹತ್ತು ಹಲವು ವಿಶೇಷ ಪರೀಕ್ಷಾ ಫಲಿತಾಂಶ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪಾರದರ್ಶಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಸ್‌.ಡಿ. ಕಾಂಬಳೆ,ಉಪನಿರ್ದೇಶಕರು
ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next