ಚಿಕ್ಕೋಡಿ: ಚಿಕ್ಕೋಡಿ ಜಿಲ್ಲಾ ಮಟ್ಟದ ಕನಕದಾಸ ಜಯಂತಿ ಉತ್ಸವದ ಅಂಗವಾಗಿ ನಾಗರಮುನ್ನೋಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡ ಅಂತಾರಾಜ್ಯ ಮಟ್ಟದ ಭವ್ಯ ಟಗರಿನ ಕಾಳಗ ನೆರೆದ ಜನರಲ್ಲಿ ರೋಮಾಂಚನ ಮೂಡಿಸಿ ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿತು.
ಗ್ರಾಮದಲ್ಲಿ ಮಂಗಳವಾರ ಸಂಜೆ ಆರಂಭವಾದ ಭವ್ಯ ಟಗರಿನ ಕಾಳಗ ಬುಧವಾರ ಬೆಳಗ್ಗೆ 10 ಗಂಟೆಯವರೈಗೂ ನಡೆಯಿತು. ಕಾಳಗದಲ್ಲಿ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಶಿವಮೊಗ್ಗ, ಬೆಂಗಳೂರು, ವಿಜಯಪುರ, ನೆರೆ ರಾಜ್ಯಗಳಾದ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಪುಣೆ, ಮುಂಬಯಿ, ಆಂಧ್ರದಿಂದ ಸುಮಾರು 300ಕ್ಕೂ ಹೆಚ್ಚಿನ ಟಗರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಬಿರುಸಿನ ಸೆಣಸಾಟ ನಡೆಸಿದವು.
ಅಂತಾರಾಜ್ಯ ಮಟ್ಟದ ಟಗರಿನ ಕಾಳಗ ವೀಕ್ಷಿಸಲು ಚಿಕ್ಕೋಡಿ ಜಿಲ್ಲೆಯ ಮತ್ತು ನೆರೆಯ ಬಾಗಲಕೋಟೆ ಜಿಲ್ಲೆಯ ಸಾವಿರಾರು ಸಂಖ್ಯೆಯ ಜನರು ಆಗಮಿಸಿ ಸ್ಪರ್ಧಾಕಣಕ್ಕೆ ರಂಗೇರಿಸಿದರು. ಸ್ಪರ್ಧೆ ಫಲಿತಾಂಶ: ಟಗರಿನ ಕಾಳಗದಲ್ಲಿ ಐದು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಹಾಲು ಹಲ್ಲಿನ ಟಗರಿನ ಕಾಳಗದಲ್ಲಿ ದುರ್ಗಾ ಪರಮೇಶ್ವರಿ ಗುತ್ತಿಗುಳಿ ಟಗರು ಪ್ರಥಮ, ಅಪ್ಪಾಜಿ ಆಶೀರ್ವಾದ ಬೆಲ್ಲದ ಬಾಗೇವಾಡಿ ಟಗರು ದ್ವಿತೀಯ ಸ್ಥಾನ ಪಡೆಯಿತು.
ಎರಡು ಹಲ್ಲಿನ ಟಗರಿನ ಕಾಳಗದಲ್ಲಿ ವೀರಸಿದ್ದೇಶ್ವರ ಹುಚ್ಚಾ ಕಪರಟ್ಟಿ ಟಗರು ಪ್ರಥಮ, ಮುಗಳಕೋಡ ಟೈಗರ ಜಿಂದಾಲ ಟಗರು ದ್ವಿತೀಯ ಸ್ಥಾನ ಪಡೆಯಿತು. ನಾಲ್ಕು ಹಲ್ಲಿನ ಟಗರಿನ ಪಂದ್ಯದಲ್ಲಿ ಕಪರಟ್ಟಿ ಡೇಂಜರ ಕರಿಯಾ ಟಗರು ಪ್ರಥಮ, ಪೋಳಗಾಂವದ ರವಣಾಥ ಟಗರು ದ್ವಿತೀಯ ಸ್ಥಾನ ಪಡೆಯಿತು. ಆರು ಹಲ್ಲಿನ ಟಗರಿನ ಪಂದ್ಯದಲ್ಲಿ ಹಿರೇ ಮುಚ್ಚಾಳಗುಡ್ಡದ ಕರಿಸಿದ್ದೇಶ್ವರ ಚಿಕ್ಕರಾಯನ ಟಗರು ಪ್ರಥಮ, ರನ್ನ ಬೆಳಗಲಿಯ ರಮಾನಂದ ಪ್ರಸನ್ ಟಗರು ದ್ವಿತೀಯ ಸ್ಥಾನ ಪಡೆಯಿತು. ಎಂಟು ಹಲ್ಲಿನ ಟಗರಿನ ಕಾಳಗದಲ್ಲಿ ಸಾಂಗಲಿಯ ಹುಸೆನ್ ಪಟೇಲ ಟಗರು ಪ್ರಥಮ, ಕಪ್ಪಟ್ಟಿ ಗೂಲಿ ಟಗರು ದ್ವಿತೀಯ ಸ್ಥಾನ ಪಡೆದು ನಗದು ಬಹುಮಾನ ಮತ್ತು ಶೀಲ್ಡ್ ಪಡೆದುಕೊಂಡವು.
ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಮಲ್ಲಗೌಡ ನೇರ್ಲಿ ಟಗರಿನ ಕಾಳಗಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಯುವ ಮುಖಂಡ ಶಿವು ಮರ್ಯಾಯಿ, ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ಎಂ.ಕೆ.ಪೂಜೇರಿ, ಬೀರಪ್ಪ ನಾಗರಾಳೆ, ಶಿವಪುತ್ರ ಮನಗೂಳಿ, ಲಕ್ಷ್ಮೀಕಾಂತ ಈಟಿ, ಅನೀಲ ಈಟಿ, ರಾಘವೇಂದ್ರ ಬಡಿಗೇರ ಮುಂತಾದವರು ಇದ್ದರು.