ಚಿಕ್ಕೋಡಿ: ನಮ್ಮ ಬಗ್ಗೆ ವಿರೋಧ ಪಕ್ಷದವರು ಎಷ್ಟೇ ಟೀಕಿಸಿದರೂ ನಾನು ಟೀಕೆ ಮಾಡಲು ಹೋಗುವುದಿಲ್ಲ. ಟೀಕೆಗೆ ಅಭಿವೃದ್ಧಿ ಕೆಲಸದ ಮೂಲಕವೇ ಉತ್ತರ ಕೋಡುತ್ತೇನೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ನೇಜ ಗ್ರಾಮದಲ್ಲಿ 2.48 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ನಾಗರಾಳ ಕ್ರಾಸ್-ನೇಜ ರಸ್ತೆ ರೂ. 1.50 ಕೋಟಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗರಾಳ ಕೆರೆಗೆ ನೀರು ತುಂಬಿಸುವ ಯೋಜನೆಗೆ ರೂ. 2.48 ಕೋಟಿ ಹಣ ಮಂಜೂರಾಗಿದೆ. ದೂಧಗಂಗಾ ನದಿಯಿಂದ ಸುಮಾರು 7.5 ಕಿಮೀ 12 ಇಂಚಿನ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ವಿರೋಧ ಪಕ್ಷದ ಕೆಲವರು ಅಡ್ಡಿಪಡಿಸಿದ್ದರು. ಇನ್ನು ಮೇಲೆ ಈ ಯೋಜನೆಗೆ ಯಾರೇ ಅಡ್ಡಿಪಡಿಸಿದರೂ ಕೆಲಸ ನಿಲ್ಲುವುದಿಲ್ಲ. ಏಪ್ರಿಲ್ 27ರ ಒಳಗಾಗಿ ಕಾಮಗಾರಿ ಮುಕ್ತಾಯವಾಗಿ ಕೆರೆಗೆ ನೀರು ಹರಿಸಲಾಗುತ್ತದೆ ಎಂದರು.
ಜೋಡಕುರಳಿ, ಬಾನಂತಿಕೋಡಿ, ಕಾಡಾಪುರ, ಮಲಿಕವಾಡ, ನೇಜ, ನಾಯಿಂಗ್ಲಜ, ಶಿರಗಾಂವ, ಪಟ್ಟಣಕುಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈಗಾಗಲೇ ಅನುಷ್ಠಾನವಾಗಿವೆ. ವಾಳಕಿ ಕೆರೆ ತುಂಬಿಸುವ ಯೋಜನೆಯೂ ಮಂಜೂರಾತಿ ಹಂತದಲ್ಲಿದ್ದು, ಅದಕ್ಕೂ ಶೀಘ್ರದಲ್ಲಿಯೇ ಮಂಜೂರಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ನೇಜ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಗೆ ಮೂಲ ಸೌಕರ್ಯಗಳನ್ನು ನೀಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಕ್ಷೇತ್ರದ ಎಲ್ಲ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎರಡು ಕೇಂದ್ರೀಯ ವಿದ್ಯಾಲಯ ಮಂಜೂರಾಗಿವೆ. ಒಂದು ಯಶವಂತಪುರ ಮತ್ತೊಂದು ಸದಲಗಾ ಪಟ್ಟಣಕ್ಕೆ ಮಂಜೂರಾಗಿವೆ. ಕೇಂದ್ರೀಯ ವಿದ್ಯಾಲಯಗಳು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಇವೆ. ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ಪ್ರಯತ್ನದಿಂದ ರಾಜ್ಯದಲ್ಲಿ ಹೋಬಳಿ ಮಟ್ಟದ ಸದಲಗಾ ಪಟ್ಟಣಕ್ಕೆ ಪ್ರಥಮ ಬಾರಿಗೆ ಕೇಂದ್ರೀಯ ವಿದ್ಯಾಲಯ ದೊರೆತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಸುದರ್ಶನ ಖೋತ, ಬಾಬಣ್ಣ ಖೋತ, ವಿ.ಎಸ್.ಮಾಂಜ್ರೇಕರ, ಗ್ರಾ.ಪಂ ಅಧ್ಯಕ್ಷೆ ಅಪ್ಪಾಸಾಬ ಸುಟ್ಟಟ್ಟಿ, ಪ್ರಕಾಶ ಮಗದುಮ್ಮ, ಅರುಣ ಬೋನೆ, ಕೆ.ವಿ.ಜೋಶಿ, ಪಿ.ಬಿ.ಪಾಟೀಲ, ರಾಜೀವ ಪಾಟೀಲ, ಸಂತೋಷ ಪಾಟೀಲ, ದಿಲೀಪ ಶಿರಸಟ್ಟಿ, ಶಕೀಲ್ ಬೇಗ, ಬಾಳು ಕುರಾಡೆ, ನರು ಮಾಳಿ, ಸುನೀಲ ಚಿಂಚಣೆ ಉಪಸ್ಥಿತರಿದ್ದರು.