ಚಿಕ್ಕಮಗಳೂರು: ಲಾಕ್‌ಡೌನ್ ಸಡಲಿಕೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರದಿಂದ 267 ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿದ್ದು, ತಾಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ಆರಂಭಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸೇವೆ ಪುನಃ ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಬಸ್ ಸಂಚಾರ ಸೇವೆಯನ್ನು ಬುಧವಾರದಿಂದಲೇ ಆರಂಭಿಸಲಾಗಿದೆ ಎಂದರು. ಚಿಕ್ಕಮಗಳೂರು ವಿಭಾಗದ 540 ಬಸ್‌ಗಳ ಪೈಕಿ. 267 ಬಸ್ ಸಂಚಾರ ಆರಂಭಿಸಿವೆ. ಬೇಡಿಕೆ ಹೆಚ್ಚಿರುವ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಸಂಚಾರ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಧರ್ಮಸ್ಥಳಕ್ಕೆ ಮೂಡಿಗೆರೆಯಿಂದ ಚಾರ್ಮಾಡಿ ಘಾಟ್ ಮೂಲಕ ಎರಡು ಮಿನಿ ಬಸ್ ಸಂಚಾರ ಆರಂಭಿಸಿದ್ದು, ಮೂಡಿಗೆರೆ ಪಟ್ಟಣದಿಂದ ಸಕಲೇಶಪುರ, ಹುನಗುಂದ, ಹುಬ್ಬಳ್ಳಿ, ಬೆಳಗಾವಿ, ಹಾಸನ, ಶಿವಮೊಗ್ಗ, ಚಿತ್ರದುರ್ಗ ಸಂಪರ್ಕದ ಬಸ್‌ಗಳ ಸಂಚಾರವನ್ನೂ ಆರಂಭಿಸಲಾಗಿದೆ ಎಂದು ತಿಳಿಸಿದರು.
ಮಲೆನಾಡು ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ಶೃಂಗೇರಿ, ಕಳಸ, ಕೊಪ್ಪ, ಎನ್. ಆರ್.ಪುರ ಪಟ್ಟಣಗಳಿಗೆ ಬಸ್‌ಗಳ ಸಂಚಾರ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದ್ದು, ಮಲೆನಾಡು ಭಾಗದಲ್ಲಿ ಖಾಸಗಿ ಬಸ್‌ಗಳ ಸಂಚಾರ ಇನ್ನೂ ಆರಂಭವಾಗದಿರುವುದರಿಂದ ಈ ಭಾಗದಲ್ಲಿ ಸರಕಾರಿ ಬಸ್‌ಗಳ ಸಂಚಾರಕ್ಕೆ ಕ್ರಮವಹಿಸಲಾಗಿದೆ. ಇದರಿಂದ ಮಲೆನಾಡಿನ ಗ್ರಾಮೀಣ ಜನರಿಗೆ ಅನುಕೂಲವಾಗಿದೆ ಎಂದರು.
ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್ ಸಂಚಾರದಲ್ಲಿ ಪ್ರಯಾಣಿಕರ ಸಂಖ್ಯೆ 30ಕ್ಕೆ ಸರ್ಕಾರ ನಿಗದಿಪಡಿಸಿದ್ದು, 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬಸ್ ಸಂಚರಿಸುತ್ತಿದ್ದು ಹಂತ ಹಂತವಾಗಿ ಎಲ್ಲೆಡೆ ಬಸ್ ಸಂಚಾರ ಆರಂಭಿಸಲಾಗುವುದು.
.ಎಚ್.ಟಿ.ವಿರೇಶ್,
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ