Advertisement

ಸ್ವಾಧಾರ ಕೇಂದ್ರ ಮಂಜೂರು

12:12 PM Aug 30, 2019 | Naveen |

ಚಿಕ್ಕಮಗಳೂರು: ನಗರದ ಕಸ್ತೂರಿಬಾ ಸದನ ಸಾಂತ್ವನ ಕೇಂದ್ರಕ್ಕೆ ಕೇಂದ್ರ ಸರ್ಕಾರ ಸ್ವಾಧಾರ ಕೇಂದ್ರ ಮಂಜೂರು ಮಾಡಿದ್ದು,   ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಸದನದ ಕಾರ್ಯದರ್ಶಿ ಮೋಹಿನಿ ಸಿದ್ಧೇಗೌಡ ಹೇಳಿದರು.

Advertisement

ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಧಾರ ಕೇಂದ್ರ ಮಂಜೂರಾ ಗಿರುವುದು ಶೋಷಿತ ಹೆಣ್ಣುಮಕ್ಕಳಿಗೆ ಬಹಳ ಸಹಕಾರಿಯಾಗಲಿದೆ. ಈ ಹಿಂದೆ ಕಷ್ಟ ಹೇಳಿಕೊಂಡು ಬರುವ ಶೋಷಿತ ಹೆಣ್ಣುಮಕ್ಕಳನ್ನು ಇಲ್ಲಿ ಇರಿಸಿಕೊಳ್ಳಲಾಗದೆ ಬೇರೆ ಕಡೆ ಕಳುಹಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇಲ್ಲಿಯೇ ಸ್ವಾಧಾರ್‌ ಕೇಂದ್ರ ತೆರೆಯುವುದರಿಂದ ಅಂತಹವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಕೇಂದ್ರದಲ್ಲಿ ಕನಿಷ್ಠ 30 ಮಂದಿ ಮಹಿಳೆಯರನ್ನು ದಾಖಲು ಮಾಡಲು ಅವಕಾಶವಿದೆ. ಅವರಿಗೆ ಒಂದರಿಂದ 2ವರ್ಷ ಉಚಿತ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಗೌರಿ ಕಾಲುವೆಯಲ್ಲಿ ಬಾಡಿಗೆ ಕಟ್ಟಡ ನೋಡಿದ್ದೇವೆ. ಮಂಜೂರಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ಬೇಗನೆ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು.

ಕಸ್ತೂರಿಬಾ ಸದನ ಸಾಂತ್ವನ ಕೇಂದ್ರಕ್ಕೆ ಜನವರಿಯಿಂದ ಆಗಸ್ಟ್‌ ವರೆಗೆ ಒಟ್ಟು 62 ಪ್ರಕರಣ ದಾಖಲಾಗಿವೆ. ಅದರಲ್ಲಿ 45 ಪ್ರಕರಣ ಮುಕ್ತಾಯ ಮಾಡಲಾಗಿದ್ದು, 17 ಬಾಕಿ ಇವೆ. ಕೌಟುಂಬಿಕ ಕಲಹ 49, ಇತರೆ 13 ಇದ್ದು ರಾಜೀ ಸಂಧಾನದ ಮೂಲಕ 38 ಕೇಸು ಇತ್ಯರ್ಥಪಡಿಸಿದ್ದು, 7ಕೇಸುಗಳನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.

Advertisement

ಕಸ್ತೂರಿಬಾ ಸದನ ಕೌಟುಂಬಿಕಾ ಸಲಹಾ ಕೇಂದ್ರಕ್ಕೆ ಒಟ್ಟು 55 ಕೇಸುಗಳು ದಾಖಲಾಗಿವೆ. ಅದರಲ್ಲಿ 18 ಇತ್ಯರ್ಥಪಡಿಸಿದ್ದು, 33ಬಾಕಿ ಇವೆ. ವರದಕ್ಷಿಣೆ 7, ದಾಂಪತ್ಯದಲ್ಲಿ ವಿರಸ 11, ಅತ್ತೆ, ಮಾವ, ಪೋಷಕರ ಮಧ್ಯಪ್ರವೇಶ 13, ಬಹು ಪತ್ನಿತ್ವ 8, ಮದ್ಯಪಾನ ವ್ಯಸನಿ ಕುಟುಂಬದ ಸಮಸ್ಯೆ 8, ಆರ್ಥಿಕ ಶೋಷಣೆಯಿಂದ ಬಳಲುತ್ತಿರುವವರ ಸಮಸ್ಯೆ 3, ಇತರೆ 5 ಸೇರಿ ಒಟ್ಟು 55 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ರಾಜೀ ಸಂಧಾನದ ಮೂಲಕ 9, ನ್ಯಾಯಾಲಯಕ್ಕೆ ಕಳುಹಿಸಿದ್ದು, 1 ಹಾಗೂ ಕೈಬಿಟ್ಟ ಪ್ರಕರಣಗಳು 8 ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಸ್ತೂರಿಬಾ ಸದನದ ಅಧ್ಯಕ್ಷೆ ಯಮುನಾ , ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ಜಯಶ್ರೀ, ಪಾರ್ವತಿ, ಶುಭಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next