ಚಿಕ್ಕಮಗಳೂರು: ಕೋವಿಡ್ ವೈರಸ್ ಭೀತಿಯ ನಡುವೆಯೂ ಕಾಫಿನಾಡಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭಗೊಂಡಿದೆ. 12,262 ವಿದ್ಯಾರ್ಥಿಗಳು ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರೆ, 1,123 ವಿದ್ಯಾರ್ಥಿಗಳು ಗೈರಾದರು.
ಜಿಲ್ಲಾದ್ಯಂತ 13,924 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 58 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. 13,924 ವಿದ್ಯಾರ್ಥಿಗಳ ಪೈಕಿ 12,265 ವಿದ್ಯಾರ್ಥಿಗಳು ಮೊದಲ ದಿನದ ಆಂಗ್ಲಭಾಷೆ ಪರೀಕ್ಷೆಯನ್ನು ಯಾವುದೇ ಭಯಭೀತಿಯಿಲ್ಲದೇ ಪರೀಕ್ಷೆ ಎದುರಿಸಿದರು. ಕೋವಿಡ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಬುಧವಾರ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲೂ ಮಾದರಿ ಪರೀಕ್ಷಾ ಅಣಕು ಪ್ರದರ್ಶನವನ್ನು ನಡೆಸಲಾಗಿತ್ತು ಹಾಗೂ ಪ್ರತಿ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗೂ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಿಗೂ ಶಿಕ್ಷಣ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಲೀಸ್ ಇಲಾಖೆ ಸಿಬ್ಬಂದಿ ಗುರುವಾರ ಬೆಳಿಗ್ಗೆ 7.30 ರಿಂದ 8 ಒಳಗೆ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಸಲಕ ಸಿದ್ಧತೆಗಳನ್ನು ಮಾಡಿಕೊಂಡರು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಬೆಳಿಗ್ಗೆ 8ಗಂಟೆಯ ನಂತರ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಲಾಗಿದ್ದ ಬಾಕ್ಸ್ ಮಾರ್ಕ್‌ಗಳಲ್ಲಿ ಸರತಿಯಲ್ಲಿ ನಿಲ್ಲಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸ್ಯಾನಿಟೈಸರ್ ನೀಡಿ ನಂತರ ಥರ್ಮಲ್ ಸ್ಕ್ಯಾನಿಂಗ್ ಒಳಪಡಿಸಿ, ಮಾಸ್ಕ್ ಧರಿಸಿದ ನಂತರವೇ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು.
ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಸಿ ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಮುಂಚಿತವಾಗಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಮೀಟರ್ ಅಂತರದಲ್ಲಿ ಹಾಕಲಾಗಿದ್ದ ಡೆಸ್ಕ್ ಗಳಲ್ಲಿ ವಿದ್ಯಾರ್ಥಿಗಳು ಆಸೀನರಾಗಲು ಕೊಠಡಿ ಮೇಲ್ವಿಚಾರಕರು ಅನುವು ಮಾಡಿಕೊಟ್ಟರು. ಬೆಳಿಗ್ಗೆ 10.30ಕ್ಕೆ ಮಧ್ಯಾಹ್ನ 1.30ರ ವರೆಗೂ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆದರು. ಕೋವಿಡ್ ಸೋಂಕು ಪತ್ತೆಯಾಗಿ ಕಂಟೇನ್ಮೆಂಟ್ ಪ್ರದೇಶವೆಂದು ಗುರುತಿಸಿ ಕೊಂಡಿರುವ ಬೀರೂರಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಕಡೂರಿನ ಆರು ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಅನಾರೋಗ್ಯದ ಕಾರಣದಿಂದ ಬೀರೂರಿನಲ್ಲಿ ಇಬ್ಬರು, ಕಡೂರಿನಲ್ಲಿ ಎಂಟು, ಕೊಪ್ಪದಲ್ಲಿ ಇಬ್ಬರು, ಶೃಂಗೇರಿಯಲ್ಲಿ ಮೂವರು ಸೇರಿದಂತೆ ಹದಿನೈದು ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು.
ಜಿಲ್ಲೆಯಲ್ಲಿ 554 ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಬೀರೂರಿನಲ್ಲಿ 65, ಚಿಕ್ಕಮಗಳೂರಿನಲ್ಲಿ 141, ಕಡೂರಿನಲ್ಲಿ 116, ಕೊಪ್ಪದಲ್ಲಿ 18, ಮೂಡಿಗೆರೆಯಲ್ಲಿ 86, ಎನ್. ಆರ್.ಪುರದಲ್ಲಿ 27, ಶೃಂಗೇರಿ 10, ಹಾಗೂ ತರೀಕೆರೆಯಲ್ಲಿ 89 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಚಿಕ್ಕಮಗಳೂರಿನಲ್ಲಿ ಓರ್ವ ಹಾಗೂ ಮೂಡಿಗೆರೆಯಲ್ಲಿ ಓರ್ವ ವಲಸೆ ವಿದ್ಯಾರ್ಥಿ ಗೈರು ಹಾಜರಾಗಿದ್ದರು.
ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರದಿಂದ ಆರಂಭಗೊಂಡಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಗಮವಾಗಿ ನಡೆದಿದೆ. ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದಂತೆ ಥರ್ಮಲ್ ಸ್ಕ್ಯಾನಿಂಗ್ ನಡೆಸಿ, ಸ್ಯಾನಿಟೈಸರ್ ಬಳಸಿ ಮಾಸ್ಕ್ ಧರಿಸಿದ ನಂತರವೇ ಪರೀಕ್ಷೆಗೆ ಬಿಡಲಾಯಿತು.
ಸಿ.ನಂಜಯ್ಯ, ಡಿಡಿಪಿಐ