Advertisement

ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ

03:45 PM Feb 23, 2020 | Naveen |

ಚಿಕ್ಕಮಗಳೂರು: ಫೆ.28 ರಿಂದ ಮಾ.1ರ ವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಉತ್ಸವದ ಅಂಗವಾಗಿ ವಿವಧ ಕ್ರೀಡಾ ಸ್ಪರ್ಧೆಗಳು ಇಂದಿನಿಂದ ಆರಂಭಗೊಳ್ಳಲಿದ್ದು, ಅಂಕಣಗಳು ಸಿದ್ಧಗೊಂಡಿವೆ. ಉತ್ಸವದಲ್ಲಿ ವಿವಿಧ ಜಾನಪದ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಒಳಾಂಗಣ ಮತ್ತು ಹೊರಂಗಣ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಕಲಾವಿದರು ಮತ್ತು ರಾಜ್ಯದ ಬೇರೆ ಬೇರೆ ಜಿಲ್ಲೆಯ ಹೆಸರಾಂತ ಕಲಾವಿದರೂ ಕಲಾ ಪ್ರದರ್ಶನ ನೀಡಿ ಕಲಾರಸಿಕರನ್ನು ಮನ ರಂಜಿಸಲಿದ್ದಾರೆ.

Advertisement

ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಜನಪದ ಕಲಾ ತಂಡ, ಟಿ.ವಿ. ವಾಹಿನಿ ವಿವಿಧ ರಿಯಾಲಿಟಿ ಶೋ ವಿಜೇತರು ಮತ್ತು ಖ್ಯಾತ ಚಲನಚಿತ್ರ ಗಾಯಕರಿಂದ ಸಂಗೀತ ಸಂಭ್ರಮ, ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಗರದ ಸುಭಾಷ್‌ ಚಂದ್ರಬೋಸ್‌ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಆಟದ ಮೈದಾನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತಿದೆ. ಉತ್ಸವ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು ಆಟೋಗಳು, ಅಂಗಡಿ ಮುಗ್ಗಟ್ಟು ಸೇರಿದಂತೆ ಆಯ್ದ ಸ್ಥಳಗಳಲ್ಲಿ ಉತ್ಸವದ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಮೂರುದಿನಗಳ ಉತ್ಸವದಲ್ಲಿ ನಗರದ ಎಂಜಿ ರಸ್ತೆಯ ಅಲ್ಲಲ್ಲಿ ಹಗಲು ಮತ್ತು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನಗರದ ಬೋಳರಾಮೇಶ್ವರ ದೇವಾಲಯ ಸಮೀಪದ ಅರಣ್ಯ ಇಲಾಖೆ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರದವರೆಗಿನ ರಸ್ತೆಯಲ್ಲಿ ಮೂರು ದಿನಗಳ ಕಾಲ ಸಸ್ಯಾಹಾರಿ ಹಾಗೂ ಮಾಂಸಾಹಾರ, ಸಿರಿಧಾನ್ಯಗಳ ವೈವಿಧ್ಯಮಯ ಆಹಾರ ಮೇಳಕ್ಕೂ ಸಿದ್ಧತೆಗಳು ನಡೆಯುತ್ತಿದೆ.

ಜಿಲ್ಲಾ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ನಗರದಲ್ಲಿ ಜಿಲ್ಲಾಡಳಿತ ನಾಗರಿಕರಿಗಾಗಿ ಹೆಲಿಟೂರಿಸಂ ಆಯೋಜಿಸಿದ್ದು ಫೆ.28ರಂದು ಹೆಲಿಟೂರಿಸಂ ಗೆ ಚಾಲನೆ ದೊರೆಯಲಿದ್ದು, ನಗರದ ಐಡಿಎಸ್‌ಜಿ ಕಾಲೇಜು ಮೈದಾನದಿಂದ ಹೆಲಿಕಾಪ್ಟರ್‌ ಮೂಲಕ ನಗರ ಸೇರಿದಂತೆ ಮುಳ್ಳಯ್ಯನಗಿರಿ ಶ್ರೇಣಿಗಳ ವ್ಯಾಪಿಯಲ್ಲಿ ಸುತ್ತು ಹೊಡೆಯಲಿದೆ. ಹೆಲಿಕಾಪ್ಟರ್‌ ನಲ್ಲಿ ಪ್ರದಕ್ಷಿಣೆ ಹಾಕಲು ಪ್ರತಿ ವ್ಯಕ್ತಿಗೆ 3 ಸಾವಿರ ಶುಲ್ಕ ನಿಗದಿಪಡಿಸಲಾಗಿದ್ದು ಶುಲ್ಕದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿ ಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ಹೆಲಿಟೂರಿಸಂ ಜಿಲ್ಲಾ ಉತ್ಸವದ ಆಕರ್ಷಣೆಯಾಗಿ ಜನಮನ ಸೆಳೆಯಲಿದೆ. ಜಿಲ್ಲಾ ಉತ್ಸವ ಸಮೀಪಿಸುತ್ತಿದ್ದು, ದಿನದಿಂದ ದಿನಕ್ಕೆ ನಗರದಲ್ಲಿ ಹಬ್ಬದ ವಾತವರಣ ಕಳೆಗಟ್ಟುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next