ಚಿಕ್ಕಮಗಳೂರು: ಆರ್ಥಿಕತೆಗೆ ಬ್ಯಾಂಕ್‌ಗಳ ಸಕ್ರೀಯ ಪಾತ್ರ ಮುಖ್ಯವಾಗಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ನಬಾರ್ಡ್ ಕೈಪಿಡಿಯನ್ನು ಹೊರತಂದಿದೆ ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ವಿಠಲ್ ತಿಳಿಸಿದರು.
ಗುರುವಾರ ನಗರದ ಕಾಪ್‌ಸೆಟ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕ್ ಹಾಗೂ ಅಭಿವೃದ್ಧಿ ಇಲಾಖೆ ಪ್ರತಿನಿಧಿಗಳ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ನಬಾರ್ಡ್ 2020-21ನೇ ಸಾಲಿಗೆ ಸಿದ್ಧಪಡಿಸಿರುವ 5,715.40 ಕೋಟಿ ರೂ. ಸಂಭವನೀಯ ಸಾಲ ವಿತರಣೆಯ ಅಂಕಿ-ಅಂಶಗಳ ಪಿಎಲ್‌ಸಿಪಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಕೈಪಿಡಿಯಲ್ಲಿ ಗುರುತಿಸಿರುವ ಆದ್ಯತೆಯನ್ನು ಅನುಸರಿಸಿ ಪ್ರತಿ ಬ್ಯಾಂಕ್ ಸಾಲ ವಿತರಿಸಿದಲ್ಲಿ ಜಿಲ್ಲೆಯ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಇ. ಪ್ರತಾಪ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಆರ್ಥಿಕತೆ ಸಾಮರ್ಥ್ಯಕ್ಕೆ ಅನುಗುಣವಾದ ಸಮತೋಲನದ ಬೆಳವಣಿಗೆಗೆ ಪೂರಕವಾದ ಸಂಭವನೀಯ ಸಾಲ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳ ಬೇಡಿಕೆ, ಸಾಮರ್ಥ್ಯ, ಪೂರೈಕೆ ಅರಿತು ಮುಂಬರುವ ದಿನಗಳಲ್ಲಿ ಸಾಲ ಪ್ರಮಾಣದ ಬಗ್ಗೆ
ಬೆಳಕು ಚೆಲ್ಲಲಾಗಿದೆ ಎಂದರು.
ಜಿಲ್ಲೆಯ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಅಧ್ಯಯನ ಮಾಡಿದ್ದು, 2020-21ರಲ್ಲಿ ಆದ್ಯತಾ ವಲಯದ ಸಾಲ ವಿತರಣೆಗೆ ಮಾರ್ಗದರ್ಶಿಯಾಗಿದೆ. ಬ್ಯಾಂಕ್‌ಗಳು ಸಾಲ ನೀತಿ ರೂಪಿಸಿಕೊಳ್ಳುವುದರ ಜೊತೆಗೆ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ, ಕೈಗಾರಿಕೆ, ಆರ್ಥಿಕ ನೀತಿಯ ಪ್ರಮುಖ ಅಂಶಗಳನ್ನು ಕೈಪಿಡಿಯಲ್ಲಿ ಸಂಗ್ರಹಿಸಿ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಆರ್.ಜೆ.ಗಿರಿಗೌಡ, ಆರ್‌ಬಿಐ ಲೀಡ್ ಆಫೀಸರ್ ಎಂ.ನಾಗರಾಜ್, ಕಾರ್ಪೋರೇಷನ್ ಬ್ಯಾಂಕ್ ಡಿಜಿಎಂ ಉಡುಪಿಯ ಡೆಲಿಯಾ ಡೈಯಾಸ್, ಕಾಪ್‌ಸೆಟ್ ಮುಖ್ಯಸ್ಥ ಜಿ.ರಮೇಶ್ ಉಪಸ್ಥಿತರಿದ್ದರು.