ಚಿಕ್ಕಮಗಳೂರು: ಕೋವಿಡ್ ಸೋಂಕು ರಾಜ್ಯಕ್ಕೆ ಬರಬಾದರು ಅಂದುಕೊಂಡ್ವಿ, ಬಂತು.. ಜಿಲ್ಲೆಗೆ ಬರಬಾರದು ಅಂದುಕೊಂಡ್ವಿ… ಬಂತು ಈಗ ನಮ್ಮಗೆ ಬರಬಾರದು ಎನ್ನುವ ಕಾಲ ಬಂದಿದೆ. ನಮಗೆ ಬರಬಾರದು ಎಂದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕೆಂದು ಸಚಿವ ಸಿ.ಟಿ. ರವಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿನಿಂದ ತಪ್ಪಿಸಿಕೊಳ್ಳುವುದು ಅವರವರ ಕೈಯಲ್ಲಿದೆ. ಜಿಲ್ಲೆಯಲ್ಲಿ ಇದುವರೆಗೂ 28 ಪ್ರಕರಣಗಳು ಪತ್ತೆಯಾಗಿವೆ. 8 ಸಕ್ರಿಯ ಪ್ರಕರಣಗಳು, 17 ಸೋಂಕಿತರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 2 ಫಾಲ್ಸ್ ಪಾಸಿಟಿವ್ ಬಂದಿದೆ. ಅಜ್ಜಂಪುರದ 72 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸೋಂಕಿತ 10ನೇ ತರಗತಿ ವಿದ್ಯಾರ್ಥಿ ಪ್ರಕರಣದಲ್ಲಿ ನಾಲ್ಕು ಬಾರಿ ಮರುಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿದೆ. ಮೊದಲು ಸಂಗ್ರಹಿಸಿದ್ದ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಮರುಪರೀಕ್ಷೆಗೆ ಕಳಿಸಲಾಗಿದೆ. ಆ ವರದಿಯೂ ಬರಲಿದೆ. ವಿದ್ಯಾರ್ಥಿ 10ನೇ ತರಗತಿ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಿಲ್ಲ, ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಮಾನಸಿಕ ತಜ್ಞರಿಂದ ಕೌನ್ಸಲಿಂಗ್ ನಡೆಸಲಾಗಿದೆ ಎಂದರು.