ಚಿಕ್ಕಮಗಳೂರು: ಪಿಯು ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ವಿಚಾರದಲ್ಲಿ ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೌಲ್ಯ ಮಾಪಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಮೌಲ್ಯಮಾಪನ ಕೇಂದ್ರಗಳನ್ನು ವಿಕೇಂದ್ರಿಕರಣಗೊಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಸರ್ಕಾರದ ಆದೇಶದಿಂದ ಮೌಲ್ಯಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ಮೌಲ್ಯಮಾಪನ ಕಾರ್ಯ ಅಂತ್ಯಗೊಳ್ಳಲು ಕನಿಷ್ಟ 40ದಿನಗಳ ಕಾಲ ಬೇಕಾಗಬಹುದು. ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಮೌಲ್ಯಮಾಪಕರು ಉಳಿದುಕೊಳ್ಳಲು ವಸತಿ, ಊಟದ ವ್ಯವಸ್ಥೆ ಹಾಗೂ ವಾಹನ ವ್ಯವಸ್ಥೆಯಿಲ್ಲದೆ ಒತ್ತಡದಲ್ಲಿ ಮೌಲ್ಯಮಾಪನ ಕಾರ್ಯ ನಡೆಸಬೇಕಾದ ಪರಿಸ್ಥಿತಿ ಇದೆ ಎಂದರು.
ಒತ್ತಡದಲ್ಲಿ ಕಾರ್ಯನಿರ್ವಹಿಸುವಾಗ ಮೌಲ್ಯಮಾಪನದಲ್ಲಿ ವ್ಯತ್ಯಾಸವಾದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇನ್ನೂ ಸಾಕಷ್ಟು ಕಾಲಾವಕಾಶವಿದ್ದು, ಮೌಲ್ಯಮಾಪಕರ ಮೇಲೆ ಒತ್ತಡ ತರದೆ. ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ತಿಳಿಸಿದರು. ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂ.18ಕ್ಕೆ ನಿಗದಿಯಾಗಿದ್ದು, ಮೌಲ್ಯಮಾಪನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಆದ್ದರಿಂದ ಮೂಲಭೂತ ಸೌಲಭ್ಯಗಳೊಂದಿಗೆ ಸ್ಪಷ್ಟ ಪರಿಕಲ್ಪನೆಯೊಂದಿಗೆ ಮೌಲ್ಯಮಾಪನ ನಿಗದಿಪಡಿಸಬೇಕು. ಮೌಲ್ಯಮಾಪಕರನ್ನು ಒತ್ತಡಕ್ಕೆ ದೂಡಬಾರದು ಎಂದರು.