Advertisement

ಗಣೇಶ ಹಬ್ಬ-ಮೊಹರಂ ಶಾಂತಿಯಿಂದ ಆಚರಿಸಿ

03:19 PM Aug 31, 2019 | Naveen |

ಚಿಕ್ಕಮಗಳೂರು: ಗಣೇಶ ಚತುರ್ಥಿ ಮತ್ತು ಮೊಹರಂ ಒಂದೇ ತಿಂಗಳಲ್ಲಿ ಬಂದಿವೆ. ಎರಡೂ ಸಮುದಾಯದ ಜನ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಎಸ್ಪಿ ಹರೀಶ್‌ ಪಾಂಡೆ ಹೇಳಿದರು.

Advertisement

ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಪರಿಸರಕ್ಕೆ ಧಕ್ಕೆ ಎಂಬ ಕಾರಣಕ್ಕೆ ಪಿಒಪಿ ಗಣಪತಿಯನ್ನು ನಿಷೇಧಿಸಲಾಗಿದೆ. ಪೆಂಡಾಲ್ ಬಳಿ ವಿದ್ಯುತ್‌ ಸಂಪರ್ಕ ನೀಡುವಾಗ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಗಣಪತಿ ಮುಂದೆ ಹಣತೆ, ಊದುಬತ್ತಿ ಇಡುವುದರಿಂದ ಬೆಂಕಿ ಹತ್ತುವ ಸಾಧ್ಯತೆಯಿದ್ದು, ಸ್ಥಳದಲ್ಲಿ ಒಂದು ಅಗ್ನಿ ನಂದಕ ಇರಿಸುವುದು ಒಳಿತು. ದೊಡ್ಡ ಪೆಂಡಾಲ್ನವರು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1772 ಪೆಂಡಾಲ್ಗಳಲ್ಲಿ ಗಣಪತಿ ಪೂಜಿಸಲಿದ್ದು, ಎಲ್ಲ ಕಡೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಹಾಕಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸ್ವಯಂ ಸೇವಕರನ್ನು ನೇಮಿಸಿಕೊಂಡು ಶಾಂತಿ- ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಗಣಪತಿ ವಿಸರ್ಜಿಸುವಾಗ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ನಗರ, ಪಟ್ಟಣ ವ್ಯಾಪ್ತಿಯ ಪ್ರಮುಖ ಕೆರೆಯಲ್ಲಿ ಬೋಟ್, ಕ್ರೇನ್‌, ಲೈಫ್‌ ಜಾಕೆಟ್ ಹಾಗೂ ಈಜುಗಾರರನ್ನು ನಿಯೋಜನೆ ಮಾಡುತ್ತೇವೆ ಎಂದರು.

ಡಿಜೆ ಬಳಸುವಂತಿಲ್ಲ. 2 ಸ್ಪೀಕರ್‌ ಬಾಕ್ಸ್‌ಗೆ ಮಾತ್ರ ಅವಕಾಶವಿದೆ. ದೇವರ ಮುಂದೆ ಕುಡಿದು ಕುಣಿಯುವುದನ್ನು ನಿಯಂತ್ರಿಸಿ, ಹಬ್ಬದ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ಸಂದೇಶಗಳಿಗೆ ಮಹತ್ವ ನೀಡಬಾರದು. ಅವುಗಳನ್ನು ಡಿಲೀಟ್ ಮಾಡಿ. ಪ್ರಮುಖವಾಗಿ ಪ್ರಸಾದ ಅಥವಾ ಲಘು ಉಪಹಾರ ತಯಾರಿಸುವಾಗಿ ಬಹಳ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಿಂಡಿ ಅಥವಾ ಪ್ರಸಾದ ತಯಾರಿಸುವಾಗ ಸ್ವತಃ ಸ್ವಯಂ ಸೇವಕರೆ ಖುದ್ದು ನಿಂತು ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು

Advertisement

ಡಿವೈಎಸ್‌ಪಿ ಬಸಪ್ಪ ಅಂಗಡಿ ಮಾತನಾಡಿ, ಗಣಪತಿ ಉತ್ಸವ, ಮೆರವಣಿಗೆ ಸಂದರ್ಭ ಸಾರ್ವಜನಿಕ ಸಂಚಾರಕ್ಕೆ ತೊಂದೆಯಾಗಬಾರದು. ತಕರಾರು ಇರುವ ಜಾಗದಲ್ಲಿ ಗಣಪತಿ ಇಡಲೇಬಾರದು. ಖಾಲಿ ನಿವೇಶನಗಳಲ್ಲಿ ಗಣಪತಿ ಇಡುವಾಗ ನಿವೇಶನ ಮಾಲೀಕರ ಅನುಮತಿ ಕಡ್ಡಾಯ ಹಾಗೂ ಒತ್ತಾಯಪೂರ್ವಕ ದೇಣಿಗೆ ಸಂಗ್ರಹ ಮಾಡಬಾರದು. ಗಣಪತಿ ವಿಸರ್ಜಿಸುವ ದಿನಾಂಕ ತಿಳಿಸಿದರೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ವೃತ್ತ ನಿರೀಕ್ಷಕ ಸಲೀಂ ಹಾಜರಿದ್ದರು.

ಅನುಮತಿಗೆ ಸಿಂಗಲ್ ವಿಂಡೋ ಮಾಡಿದ್ದು ಸ್ವಾಗತಾರ್ಹ ಎಂದು ಬಿಜೆಪಿ ಮುಖಂಡ ಬಿ.ರಾಜಪ್ಪ ಹೇಳಿದರು. ಆಯಾ ಪೊಲೀಸ್‌ ಠಾಣೆ ಸರಹದ್ದಿನಲ್ಲಿಯೇ ಅನುಮತಿ ನೀಡಲು ವ್ಯವಸ್ಥೆ ಮಾಡಬೇಕು ಎಂದು ಆಲ್ದೂರಿನ ಸುರೇಶ್‌ ಒತ್ತಾಯಿಸಿದರು. ವಾರವಿಡೀ ಗಣಪತಿ ಉತ್ವಕ್ಕೆ ಶ್ರಮಪಟ್ಟಿರುತ್ತೇವೆ. ವಿಸರ್ಜನೆ ದಿನ ಯಾರೋ ಹೊರಗಡೆಯವರು ಬಂದು ಗಲಾಟೆ ಮಾಡಿದರೆ ವ್ಯವಸ್ಥಾಪಕರಾದ ನಮ್ಮನ್ನು ಕರೆದೊಯ್ದು ಲಾಕಪ್‌ನಲ್ಲಿ ಕೂರಿಸುತ್ತೀರಿ. ಇದ್ಯಾವ ನ್ಯಾಯ ಎಂದು ಶ್ರೀಲೇಖಾ ಟಾಕೀಸ್‌ ಬಡಾವಣೆಯ ವಿಜಯ್‌ ಪ್ರಶ್ನಿಸಿದರು. ಕಳೆದ ವರ್ಷ ಗಲಾಟೆ ಆಗಿದ್ದ ತರೀಕೆರೆಗೆ ಈ ಬಾರಿ ಹೆಚ್ಚಿನ ಭದ್ರತೆ ನೀಡಬೇಕು ಎಂದು ತುಡುಕೂರು ಮಂಜು ಆಗ್ರಹಿಸಿದರು.

ಎಲ್ಲ ಹಿಂದೂ ಬಾಂಧವರಿಗೆ ಗಣೇಶ ಚತುರ್ಥಿ ಶುಭಾಶಯಗಳು. ಶಾಂತಿ- ಸೌಹಾರ್ದತೆಯಿಂದ ಹಬ್ಬ ಆಚರಿಸೋಣ ಎಂದು ಯೂಸಫ್‌ ಹಾಜಿ ಹೇಳಿದರು. ತರೀಕೆರೆ, ಮೂಡಿಗೆರೆ, ಕಡೂರು ಹಾಗೂ ಶೃಂಗೇರಿ ಭಾಗದಿಂದ ಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next