Advertisement

ಓದುಗರಿದ್ದಾರೆ-ಸಿಬ್ಬಂಧಿಯೇ ಇಲ್ಲ!

07:54 PM Oct 26, 2019 | Naveen |

ಚಿಕ್ಕಮಗಳೂರು: ನಗರದಲ್ಲಿ ಗ್ರಂಥಾಲಯ ಗಳಿಗೆ ಭೇಟಿ ನೀಡುವ ಸಾರ್ವಜನಿಕರ ಸಂಖ್ಯೆ ಉತ್ತಮವಾಗಿದೆ. ಆದರೆ, ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸ ಬೇಕಾದ ಅಧಿಕಾರಿ, ಸಿಬ್ಬಂದಿ ಹುದ್ದೆ ಶೇ.50 ರಷ್ಟು ಖಾಲಿ ಉಳಿದಿರುವುದೇ ದೊಡ್ಡ ಸಮಸ್ಯೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಕೇಂದ್ರ ಗ್ರಂಥಾಲಯವೂ ಸೇರಿದಂತೆ ಒಟ್ಟಾರೆ 7 ಗ್ರಂಥಾಲಯಗಳಿವೆ. ಇವುಗಳಿಗೆ ಸರ್ಕಾರ ಮಂಜೂರಾತಿ ನೀಡಿರುವ ಹುದ್ದೆಗಳು 20. ಆದರೆ, ಈಗ ಕರ್ತವ್ಯ ನಿರ್ವಹಿಸುತ್ತಿರುವವರು ಕೇವಲ 10 ಜನ. ಬರೋಬ್ಬರಿ ಶೇ.50 ರಷ್ಟು ಹುದ್ದೆಗಳು ಖಾಲಿ ಇವೆ.

Advertisement

ಅದರಲ್ಲೂ ಪ್ರಮುಖವಾಗಿ ಮುಖ್ಯ ಗ್ರಂಥಾಲಯಾಧಿಕಾರಿ ಹುದ್ದೆಯೇ ಖಾಲಿ ಇದ್ದು, ಪ್ರಸ್ತುತ ಬೇರೆ ಜಿಲ್ಲೆಯ ಮುಖ್ಯ ಗ್ರಂಥಾಲಯಾಧಿಕಾರಿ ನಿಯೋಜನೆ ಮೇರೆಗೆ ವಾರಕ್ಕೆ ಮೂರು ದಿನ ಇಲ್ಲಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಗ್ರಂಥಾಲಯದ ಕಟ್ಟಡವು ಸ್ವಂತದ್ದಾಗಿದೆ. 3 ಶಾಖಾ ಗ್ರಂಥಾಲಯಗಳು, 2 ಸೇವಾ ಗ್ರಂಥಾಲಯಗಳು ನಗರಸಭೆ ಸೇರಿದಂತೆ ಇನ್ನಿತರೆ ಸರ್ಕಾರಿ ಕಟ್ಟಡಗಳಲ್ಲಿ ಉಚಿತವಾಗಿ ನಡೆಯುತ್ತಿವೆ. ಕಟ್ಟಡಗಳು ಸುಸ್ಥಿತಿಯಲ್ಲಿವೆಯಾದರೂ ಕೆಲವು ಶಾಖಾ ಗ್ರಂಥಾಲಯಗಳಲ್ಲಿ ಭಾರೀ ಮಳೆಯಾದಾಗ ಸೋರುತ್ತವೆ.

ಒಂದು ಸಂಚಾರಿ ಗ್ರಂಥಾಲಯವೂ ಇದ್ದು, ವಾಹನ ಸ್ವಂತದ್ದಾಗಿದೆ. ಉತ್ತಮ ಪ್ರತಿಕ್ರಿಯೆ: ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಉತ್ತಮವಾಗಿದೆ. ಪ್ರತಿನಿತ್ಯ 1500 ಜನರು ಗ್ರಂಥಾಲಯಕ್ಕೆ ಭೇಟಿ ನೀಡಿ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಗ್ರಂಥಾಲಯಗಳ ನಿರ್ವಹಣೆಗೆಂದು ಸರ್ಕಾರದಿಂದ ಪ್ರತಿವರ್ಷ 2.10 ಲಕ್ಷ ರೂ. ಅನುದಾನ ಬರುತ್ತಿದೆ. ಸಂಚಾರಿ ಗ್ರಂಥಾಲಯಕ್ಕೆ ಪ್ರತ್ಯೇಕವಾಗಿ ನಿರ್ವಹಣೆಗೆಂದು 70 ಸಾವಿರ ರೂ. ಅನುದಾನ ಬರುತ್ತಿದೆ. ಇದಲ್ಲದೆ ನಗರಸಭೆಯಿಂದ ಸಂಗ್ರಹವಾಗುವ ಸೆಸ್‌ ಹಣದಲ್ಲಿ ಗ್ರಂಥಾಲಯ ನಿರ್ವಹಣೆಗೆ ಶೇ.6ರಷ್ಟು ಅನುದಾನವನ್ನು ಪ್ರತಿವರ್ಷ ಕೊಡಬೇಕಿದೆ. ಕಳೆದ ಹಲವು ವರ್ಷಗಳಿಂದ ಭಾರೀ ಕಡಿಮೆ ಹಣವನ್ನು ನಗರಸಭೆಯಿಂದ ನೀಡಲಾಗುತ್ತಿತ್ತು. ರಾಜ್ಯ ಮಟ್ಟದಲ್ಲಿಯೇ ತೀರ್ಮಾನವಾದಂತೆ ಈ ವರ್ಷ ಹಳೆಯ ಬಾಕಿಯೂ ಸೇರಿ 65 ಲಕ್ಷ ರೂ.ಅನ್ನು ಗ್ರಂಥಾಲಯಕ್ಕೆ ನಗರಸಭೆ ಪಾವತಿಸಿದೆ.

ಜಿಲ್ಲಾ ಕೇಂದ್ರದಲ್ಲಿರುವ ಈ ಸುಂದರ ಗ್ರಂಥಾಲಯ ಕಟ್ಟಡವನ್ನು ವಿಸ್ತರಿಸುವ ಆಲೋಚನೆಯನ್ನು ಜಿಲ್ಲಾಡಳಿತ ಸೇರಿದಂತೆ ಯಾವ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಾಡಿಲ್ಲ. ಗ್ರಂಥಾಲಯದ ಕಟ್ಟಡದ ಹಿಂಭಾಗದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲು ಸಾಕಷ್ಟು ಜಾಗವಿದೆ. ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳ ಪ್ರಕಾರ ವಿಸ್ತರಣಾ ಕಟ್ಟಡ ನಿರ್ಮಿಸಲು 3 ಕೋಟಿ ರೂ. ಪ್ರಸ್ತಾವನೆ ಹಾಗೂ ನೀಲ ನಕ್ಷೆ ಸಿದ್ಧವಾಗಿದೆ. ಗ್ರಂಥಾಲಯಕ್ಕೆ ಬರುವ ಸೆಸ್‌ ಹಣ ಬಳಸಿಕೊಂಡು ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ. ಮೀಸಲಿಡಲಾಗಿದೆ.

Advertisement

ಈ ಹಣದ ಜೊತೆಗೆ ಜಿಲ್ಲೆಯ ಓರ್ವ ಸಂಸದರು, 5 ಮಂದಿ ಶಾಸಕರು, ಮೂವರು ವಿಧಾನ ಪರಿಷತ್‌ ಸದಸ್ಯರು ಸೇರಿ ತಲಾ 25 ರಿಂದ 30 ಲಕ್ಷ ರೂ. ಅನ್ನು ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ ನೀಡಿದರೆ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಈ ಸಂಬಂಧ ಓದುಗರು ಸಹ ಅಭಿವೃದ್ಧಿ ನಿಧಿಯಿಂದ ಹಣ ನೀಡಲು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಯಾವ ರೀತಿಯ ಸ್ಪಂದನೆಯೂ ದೊರೆತಿಲ್ಲ. ಜ್ಞಾನದ ಖಜಾನೆಯಾದ ಗ್ರಂಥಾಲಯ ಯಾರಿಗೂ ಬೇಡವಾಗಿದೆ.

ಒಟ್ಟಾರೆಯಾಗಿ ನಗರದಲ್ಲಿರುವ ಗ್ರಂಥಾಲಯಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ನಗರದ ಜನತೆ ಸುಳ್ಳಾಗಿಸಿದ್ದಾರೆ. ಇಲ್ಲಿ ಖಾಲಿ ಇರುವ ಅಧಿ ಕಾರಿ, ಸಿಬ್ಬಂದಿ ಕೊರತೆಯೇ ಪ್ರಮುಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next