Advertisement
ಚಿಕ್ಕಮಗಳೂರು: ಈ ವರ್ಷದ ಮುಂಗಾರು, ಹಿಂಗಾರು ಹಾಗೂ ಚಂಡಮಾರುತದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಆಗಸ್ಟ್ ತಿಂಗಳಿನಿಂದ ಆರಂಭವಾದ ನೈರುತ್ಯ ಮುಂಗಾರು ಬಿಟ್ಟೂ ಬಿಡದೆ ಸುರಿಯಿತು.
Related Articles
Advertisement
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಹಿಂಗಾರು ಮಳೆ ಆರಂಭವಾಗುತ್ತದೆ. ಈ ಮಳೆ ಬಹುತೇಕ ಬಯಲು ತಾಲೂಕುಗಳಲ್ಲಿ ಹೆಚ್ಚಾಗಿ ಬಂದು ಮಲೆನಾಡು ಭಾಗದಲ್ಲಿ ಕ್ಷೀಣವಾಗಿರುತ್ತದೆ ಅಥವಾ ಮೋಡಗಟ್ಟಿದ ವಾತಾವರಣ ಇರುವುದು ವಾಡಿಕೆ.
ಆದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಬಿಡದೆ ಬರುತ್ತಿದೆ. ವಾಯು ಭಾರದ ಕುಸಿತದಿಂದ ಎದ್ದ ಚಂಡಮಾರುತದ ಪರಿಣಾಮ ಅಕ್ಟೋಬರ್ ತಿಂಗಳಲ್ಲೂ ಸತತ ಮಳೆಯಾಗುತ್ತಿದೆ. ಮತ್ತು ಮಳೆಗಾಲದ ಅನುಭವವೇ ಮರುಕಳಿಸಿದಂತಿದೆ.
ಅಕ್ಟೋಬರ್ 30 ರಂದು ಸಹ ಮಳೆ ಬಿಟ್ಟಿಲ್ಲ ಮತ್ತು ಕಡಿಮೆಯಾಗುವ ಸೂಚನೆಯೂ ಕಂಡುಬರುತ್ತಿಲ್ಲ. ಜಿಲ್ಲೆಯಲ್ಲಿ ಜನವರಿಯಿಂದ ಈ ವರೆಗೆ 18,701 ಮಿ.ಮೀ. ಮಳೆಯಾಗಿದೆ. ಇದರಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದಿದ್ದು ಮಾತ್ರ ಭಯಂಕರ ಮಳೆ. ಮೂಡಿಗೆರೆ ತಾಲೂಕು ಸೇರಿದಂತೆ ಮಲೆನಾಡಿನ ಹಲವು ಕಡೆ ಗುಡ್ಡ ಕುಸಿತ ಸೇರಿ ತೋಟ, ಗದ್ದೆ, ಆಸ್ತಿಪಾಸ್ತಿ ಎಲ್ಲವುದಕ್ಕೂ ಹಾನಿಯಾಯಿತಲ್ಲದೆ ಕೆಲವರ ಜೀವವನ್ನೂ ಮಳೆ ಆಪೋಶನ ಪಡೆಯಿತು.
ಈ ಬಾರಿಯ ಮಳೆಯಿಂದ ಬಯಲುಸೀಮೆ ಭಾಗದಲ್ಲಿರುವ ಜಿಲ್ಲೆಯ ಬೃಹತ್ ಕೆರೆಗಳಾದ ಅಯ್ಯನಕೆರೆ ಮತ್ತು ಮದಗದ ಕೆರೆ ಕೋಡಿ ಒಡೆದರೆ, ವೇದಾವತಿ ನದಿ ತುಂಬಿ ಹರಿಯಿತು. ಜಿಲ್ಲೆಯ ಬೃಹತ್ ಕೆರೆಗಳಾದ ಬೆಳವಾಡಿ ಮತ್ತು ವಿಷ್ಣು ಸಮುದ್ರದ ಕೆರೆ ಮಾತ್ರ ತುಂಬಲಿಲ್ಲ. ಅಂಕಿ ಅಂಶದ ಪ್ರಕಾರ ಜಿಲ್ಲೆಯ 1366 ಕ್ಕೂ ಹೆಚ್ಚು ಕೆರೆಗಳು ಭರ್ತಿಯಾದರೆ, 352 ಕೆರೆಗಳಿಗೆ ಅರ್ಧದಷ್ಟು ನೀರು ಬಂದಿದೆ. ಬೆಳೆಗಳ ಮೇಲೂ ಪರಿಣಾಮ ಬೀರಿದ್ದು, ಬಯಲು ಭಾಗದ ವಾಣಿಜ್ಯ ಬೆಳೆ ಈರುಳ್ಳಿ ಬಹುತೇಕ ನಾಶವಾಗಿದ್ದರೆ, ತರಕಾರಿ ಬೆಳೆಯುವ ಪ್ರದೇಶದಲ್ಲೂ ಮಳೆ ಹಾನಿಯುಂಟು ಮಾಡಿದೆ.
ಮಲೆನಾಡಿಗರಿಗೆ ಮಳೆ ಹೊಸತೇನಲ್ಲ. ಅದರ ಎಲ್ಲಾ ರೀತಿಯ ಬಿರುಸು ಮತ್ತು ಆವೇಶವನ್ನು ನೋಡಿದ್ದಾರೆ. ಈ ಮಳೆಯ ಅವತಾರ ಸೆಪ್ಟೆಂಬರ್ ತಿಂಗಳಿನಿಂದ ಕಡಿಮೆಯಾಗಿ ಅಕ್ಟೋಬರ್ ತಿಂಗಳಲ್ಲಿ ಮಾಯವಾಗುವುದು ವಾಡಿಕೆ. ಆದರೆ, ಈ ವರ್ಷ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಇದು ಜಿಲ್ಲೆಯ ಜನರನ್ನು ಮತ್ತಷ್ಟು ಕಂಗಾಲಾಗಿಸಿದೆ.