Advertisement

ಚಿಕ್ಕಮಗಳೂರು ಬಂದ್‌: ಲಘು ಲಾಠಿ ಪ್ರಹಾರ

06:15 AM Dec 23, 2017 | |

ಚಿಕ್ಕಮಗಳೂರು: ವಿಜಯಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಚಿಕ್ಕಮಗಳೂರು ನಗರ ಬಂದ್‌ಗೆ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಶಾಲೆಗಳನ್ನು ಮುಚ್ಚಲು ಯತ್ನಿಸಿದ ಪ್ರಮುಖ ಸಂಘಟನೆಗಳ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ವಿರೋಧಿಸಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿ ಗಲಾಟೆ ಮಾಡುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

Advertisement

ಬಂದ್‌ ಕರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗ‌ಳು, ಪೆಟ್ರೋಲ್‌ ಬಂಕ್‌, ಚಲನಚಿತ್ರ ಮಂದಿರಗಳು ಬಂದ್‌ ಆಗಿದ್ದವು. ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ, ಆಟೋ ಮತ್ತು ಮ್ಯಾಕ್ಸಿಕ್ಯಾಬ್‌ ಸಂಚಾರ ಎಂದಿನಂತೆ ಇತ್ತು. ಕೆಲವು ಸರ್ಕಾರಿ ಕಚೇರಿಗಳನ್ನು ಪ್ರತಿಭಟನಾಕಾರರು ಬಲವಂತವಾಗಿ ಮುಚ್ಚಿಸಿದರೆ, ಕೆಲವು ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದವು. ಕೆಲವು ಶಾಲಾ ಕಾಲೇಜುಗಳಿಗೆ ಬೆಳಗ್ಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳು ವಾಪಸ್‌ ಮನೆಗಳಿಗೆ ತೆರಳಬೇಕಾಯಿತು. ಇನ್ನೊಂದೆಡೆ, ಆಲ್ದೂರು ಹಾಗೂ ವಿಜಯಪುರ ಜಿಲ್ಲೆ ಇಂಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ತಾಳಿಕೋಟೆ ಬಂದ್‌ಗೆ ಕರೆ ನೀಡಲಾಗಿದೆ.  ಇದೇ ವೇಳೆ, ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಇತರೆಡೆ ಘಟನೆ ಖಂಡಿಸಿ ಪ್ರತಿಭಟನೆಗಳು ನಡೆದವು.

ತನಿಖೆ ಆರಂಭಿಸಿದ ಸಿಐಡಿ
ಈ ಮಧ್ಯೆ, ಪ್ರಕರಣದ ತನಿಖೆ ನಡೆಸಲು ನಿಯೋಜನೆಗೊಂಡಿರುವ ಸಿಐಡಿ ತಂಡ ಶುಕ್ರವಾರ ವಿಜಯಪುರ ನಗರಕ್ಕೆ ಆಗಮಿಸಿದ್ದು, ಮೃತ ಬಾಲಕಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಈ ಮಧ್ಯೆ, ಪ್ರಕರಣದ ಶಂಕಿತ ಆರೋಪಿಗಳ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ನಗರವನ್ನೇ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿರುವುದು ಕಂಡು ಬಂತು.

ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಪ್ರಕರಣ ಕುರಿತು ಪ್ರಾಮಾಣಿಕ ತನಿಖೆ ಕೈಗೊಳ್ಳಬೇಕು ಎಂದು ಗೃಹ ಸಚಿವರಿಗೆ ಪತ್ರ ಕೂಡ ಬರೆಯಲಾಗಿದೆ.
– ಉಮಾಶ್ರೀ,ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next