Advertisement

ರಾಜಕೀಯದಲ್ಲೂ ಕಾಫಿ ನಾಡಿನ ಕಂಪು; ಚಿಕ್ಕಮಗಳೂರು 5 ಕ್ಷೇತ್ರಗಳು

01:03 AM Feb 08, 2023 | Team Udayavani |

ಚಿಕ್ಕಮಗಳೂರು: ಕಾಫಿನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ಕಾಫಿಯ ಸವಿಯೊಂದಿಗೆ ರಾಜ್ಯ ರಾಜಕಾರಣದಲ್ಲೂ ಛಾಪು ಮೂಡಿಸಿದೆ. ಮಲೆನಾಡು, ಬಯಲುಸೀಮೆ ಸೊಗಡು ಹೊಂದಿರುವ ಜಿಲ್ಲೆಯಲ್ಲಿ ರಾಜಕೀಯ ಕಾವು ಕೂಡ ಜೋರಾಗಿದೆ. ಚಿಕ್ಕಮಗಳೂರು, ಮೂಡಿಗೆರೆ (ಮೀಸಲು ಕ್ಷೇತ್ರ), ಶೃಂಗೇರಿ, ಕಡೂರು, ತರೀ ಕೆರೆ ಸಹಿತ 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ವಿಧಾನಸಭಾ ಕ್ಷೇತ್ರಗಳು ಮಲೆನಾಡನ್ನು ಪ್ರತಿನಿಧಿಸಿದರೆ, ಕಡೂರು ಮತ್ತು ತರೀಕೆರೆ ಕ್ಷೇತ್ರಗಳು ಬಯಲುಸೀಮೆ ಪ್ರದೇಶ ಪ್ರತಿನಿಧಿಸುತ್ತವೆ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಕಾಲಾಂತರದಲ್ಲಿ ಬಿಜೆಪಿಯ ಗಟ್ಟಿನೆಲೆಯಾಗಿ ಮಾರ್ಪಟ್ಟಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್‌ ಪ್ರಯಾಸದಿಂದಲೇ ಒಂದು ಕ್ಷೇತ್ರಕ್ಕೆ ಮಾತ್ರ ತೃಪ್ತಿ ಪಡಬೇಕಾಯಿತು. 2023ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ-ಕಾಂಗ್ರೆಸ್‌ ಮಧ್ಯೆಯೇ ಪೈಪೋಟಿ ಎದುರಾಗಲಿದ್ದು ಕುತೂಹಲ ಮೂಡಿಸಿದೆ.

Advertisement

ಚಿಕ್ಕಮಗಳೂರು
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಈವರೆಗೆ 15 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಸ್ವತಂತ್ರ ಭಾರತದ ಮೊದಲ ಚುನಾವಣೆಯಲ್ಲಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ವಿಧಾನಸಭಾಕ್ಷೇತ್ರ ದ್ವಿಸದಸ್ಯ ಕ್ಷೇತ್ರವಾಗಿದ್ದು, ಪ್ರಥಮ ಬಾರಿಗೆ ಅಂದರೆ 1952ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಎಲ್‌.ಸುಬ್ಬಮ್ಮ ಮತ್ತು ಜಿ.ಪುಟ್ಟಸ್ವಾಮಿ ದ್ವಿಸದಸ್ಯ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಅದರಲ್ಲೂ ಪ್ರಥಮವಾಗಿ ಮಹಿಳೆಯೊಬ್ಬರು ಶಾಸಕರಾಗಿ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷ. ಇಬ್ಬರೂ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್‌ ಪಕ್ಷದ ಶಾಸಕರಾಗಿದ್ದು ಮತ್ತೂಂದು ವಿಶೇಷ. 1957ರಲ್ಲಿ ನಡೆದ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರದಿಂದ ಎ.ಎಂ.ಬಸವೇಗೌಡ ಹಾಗೂ ಎಲ್‌.ಎಚ್‌.ತಿಮ್ಮಬೋವಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಎಲ್‌.ಸುಬ್ಬಮ್ಮ (ಕಾಂಗ್ರೆಸ್‌), 1967 ಸಿಎಂಎಸ್‌ ಶಾಸ್ತ್ರಿ (ಪಿಎಸ್‌ಪಿ), 1972 ಇ.ಇ.ವಾಜ್‌ (ಕಾಂಗ್ರೆಸ್‌), 1978 ಸಿ.ಎ.ಚಂದ್ರೇಗೌಡ (ಕಾಂಗ್ರೆಸ್‌ ಐ), 1983 ಎಚ್‌.ಎ. ನಾರಾಯಣಗೌಡ (ಜೆಎನ್‌ಪಿ), 1985 ಐ.ಬಿ. ಶಂಕರ್‌ (ಪಕ್ಷೇತರ), 1989ರಿಂದ ಸತತ ಮೂರು ಬಾರಿ ಕಾಂಗ್ರೆ ಸ್‌ನ ಸಗೀರ್‌ ಅಹ್ಮದ್‌ ಗೆದ್ದಿದ್ದರು. 2004ರಿಂದ ಇಲ್ಲಿವರೆಗೆ ಸತತ ನಾಲ್ಕನೇ ಬಾರಿಗೆ ಬಿಜೆಪಿಯ ಸಿ.ಟಿ. ರವಿ ಗೆಲ್ಲುತ್ತಾ ಬಂದಿ ದ್ದಾರೆ. ಐ.ಬಿ. ಶಂಕರ್‌ ಒಬ್ಬರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪಕ್ಷೇತರ ಶಾಸಕ.

ಮೂಡಿಗೆರೆ
1952 ಮತ್ತು 1957ರ ಚುನಾವಣೆಯಲ್ಲಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರ ದ್ವಿಸದಸ್ಯ ಕ್ಷೇತ್ರವನ್ನು ಒಳಗೊಂಡಿತ್ತು. 1952ರಲ್ಲಿ ಕಾಂಗ್ರೆಸ್‌ನ ಬಿ.ಎಲ್‌.ಸುಬ್ಬಮ್ಮ ಮತ್ತು ಜಿ.ಪುಟ್ಟೇಗೌಡ, 1957ರಲ್ಲಿ ಎ.ಎಂ.ಬಸವೇಗೌಡ ಹಾಗೂ ಎಲ್‌.ಎಚ್‌.ತಿಮ್ಮಬೋವಿ ಈ ಕ್ಷೇತ್ರವನ್ನು ಪ್ರತಿನಿ ಧಿಸಿದ್ದರು. ದ್ವಿಸದಸ್ಯ ಕ್ಷೇತ್ರ ಹೊರತುಪಡಿಸಿ ಮೂಡಿಗೆರೆ ಕ್ಷೇತ್ರ ಈವರೆಗೆ 13 ವಿಧಾನಸಭೆ ಚುನಾವಣೆ ಎದುರಿಸಿದೆ. 1962ರ ಚುನಾವಣೆಯಲ್ಲಿ ಕೆ.ಎಚ್‌.ರಂಗನಾಥ್‌ (ಪಿಎಸ್‌ಪಿ), 1967ರಲ್ಲಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಕೆ.ಎಚ್‌. ರಂಗನಾಥ್‌(ಪಿಎಸ್‌ಪಿ), 1972ರಲ್ಲಿ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿ, 1978ರಲ್ಲಿ ಕಾಂಗ್ರೆಸ್‌ನ ಮೋಟಮ್ಮ, 1983ರಲ್ಲಿ ಜೆಎನ್‌ಪಿ ಪಿ.ತಿಮ್ಮಯ್ಯ, 1985ರಲ್ಲಿ ಜೆಎನ್‌ಪಿ ಪಕ್ಷದಿಂದ ಬಿ.ಬಿ. ನಿಂಗಯ್ಯ, 1989ರಲ್ಲಿ ಮೋಟಮ್ಮ (ಕಾಂಗ್ರೆಸ್‌), 1994ರಲ್ಲಿ ಜೆಡಿಎಸ್‌ನ ಬಿ.ಬಿ. ನಿಂಗಯ್ಯ, 1999ರಲ್ಲಿ ಕಾಂಗ್ರೆಸ್‌ನ ಮೋಟಮ್ಮ, 2004ರಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, 2008ರಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ. 2013ರಲ್ಲಿ ಮತ್ತೆ ಜೆಡಿಎಸ್‌ನ ಬಿ.ಬಿ. ನಿಂಗಯ್ಯ, 2018ರಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾದರು. ದ್ವಿ ಸದಸ್ಯ ಕ್ಷೇತ್ರ ಹೊರತುಪಡಿಸಿ, ಪಿಎಸ್‌ಪಿ 2 ಬಾರಿ, ನಾಲ್ಕು ಬಾರಿ ಕಾಂಗ್ರೆಸ್‌, ಬಿ.ಬಿ. ನಿಂಗಯ್ಯ ಮೂರು ಬಾರಿ ಹಾಗೂ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಮೂರು ಬಾರಿ ಆಯ್ಕೆಯಾಗಿದ್ದಾರೆ.

ಕಡೂರು
ಕಡೂರು ವಿಧಾನಸಭೆ ಕ್ಷೇತ್ರದಲ್ಲಿ ಈವರೆಗೆ 16 ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳು ಆರು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. 1952ರಲ್ಲಿ ಕಾಂಗ್ರೆಸ್‌ನ ವೈ.ಎಂ.ಚಂದ್ರಶೇಖರಯ್ಯ, 1957ರಲ್ಲಿ ಡಿ.ಎಚ್‌.ರುದ್ರಪ್ಪ (ಕಾಂಗ್ರೆಸ್‌), 1962ರಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಮರುಳಪ್ಪ, 1967ರಲ್ಲಿ ಪಿಎಸ್‌ಪಿ ಪಕ್ಷದ ಕೆ.ಎಂ. ತಿಮ್ಮಯ್ಯ, 1972ರಲ್ಲಿ ಕಾಂಗ್ರೆಸ್‌ನ ಕೆ.ಆರ್‌. ಹೊನ್ನಪ್ಪ, 1978ರಲ್ಲಿ ಕೆ.ಎಂ.ತಿಮ್ಮಯ್ಯ (ಜೆಎನ್‌ಪಿ), 1983ರಲ್ಲಿ ಎನ್‌.ಕೆ. ಹುಚ್ಚಪ್ಪ(ಕಾಂಗ್ರೆಸ್‌), 1985ರಲ್ಲಿ ಪಿ.ಬಿ. ಓಂಕಾರ ಮೂರ್ತಿ (ಪಕ್ಷೇತರ), 1989ರಲ್ಲಿ ಎಂ.ವೀರಭದ್ರಪ್ಪ (ಕಾಂಗ್ರೆಸ್‌), 1994ರಲ್ಲಿ ಕೆ.ಎಂ. ಕೃಷ್ಣಮೂರ್ತಿ(ಜೆಡಿಎಸ್‌), 1999ರಲ್ಲಿ ಕೆ.ಎಂ. ಕೃಷ್ಣಮೂರ್ತಿ (ಜೆಡಿಎಸ್‌), 2004ರಲ್ಲಿ ಕೆ.ಎಂ.ಕೃಷ್ಣಮೂರ್ತಿ (ಜೆಡಿಎಸ್‌), 2008ರಲ್ಲಿ ಕೆ.ಎಂ.ಕೃಷ್ಣಮೂರ್ತಿ (ಕಾಂಗ್ರೆಸ್‌), 2010ರಲ್ಲಿ ವೈ.ಸಿ.ವಿಶ್ವನಾಥ್‌ (ಬಿಜೆಪಿ), 2013ರಲ್ಲಿ ವೈಎಸ್‌ವಿ ದತ್ತ (ಜೆಡಿಎಸ್‌), 2018ರಲ್ಲಿ ಬಿಜೆಪಿಯ ಬೆಳ್ಳಿಪ್ರಕಾಶ್‌ ಆಯ್ಕೆಯಾಗಿದ್ದಾರೆ. ಕೆ.ಎಂ.ಕೃಷ್ಣಮೂರ್ತಿ ಕಡೂರು ಕ್ಷೇತ್ರದಲ್ಲಿ ಜನಪ್ರಿಯ ಶಾಸಕರಾಗಿದ್ದು, ಇಂದಿಗೂ ಕೂಡ ಇಲ್ಲಿನ ಜನಮಾನಸದಲ್ಲಿ ನೆಲೆಸಿದ್ದಾರೆ.

ಶೃಂಗೇರಿ
ಶೃಂಗೇರಿ ವಿಧಾನಸಭಾ ಕ್ಷೇತ್ರ ಕೊಪ್ಪ-ತೀರ್ಥಹಳ್ಳಿ ಕ್ಷೇತ್ರ ಒಳಗೊಂಡಿತ್ತು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಕೊಪ್ಪ, ನರಸಿಂಹರಾಜಪುರ ಹಾಗೂ ಶೃಂಗೇರಿ ಸೇರಿಸಿ ಶೃಂಗೇರಿ ವಿಧಾನಸಭಾ ಕ್ಷೇತ್ರ ರಚಿಸಲಾಯಿತು. 1952ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಡಿದಾಳು ಮಂಜಪ್ಪ ತೀರ್ಥಹಳ್ಳಿ-ಕೊಪ್ಪ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಶೃಂಗೇರಿ ವಿಧಾನಸಭಾ ಕ್ಷೇತ್ರ ಇದುವರೆಗೂ 15 ಚುನಾವಣೆಗಳನ್ನು ಎದುರಿಸಿದೆ. 1957ರಲ್ಲಿ ಕಾಂಗ್ರೆಸ್‌ನ ಕಡಿದಾಳು ಮಂಜಪ್ಪ, 1962ರಲ್ಲಿ ಮತ್ತೊಮ್ಮೆ ಕಡಿದಾಳ್‌ ಮಂಜಪ್ಪ ಆಯ್ಕೆಯಾದರು. ಕಡಿದಾಳು ಮಂಜಪ್ಪ ಸತತ ಮೂರು ಬಾರಿ ಆಯ್ಕೆಯಾದರು. ರಾಜಕೀಯ ಕ್ಷೇತ್ರದಲ್ಲಿ ಶುದ್ಧ ಹಸ್ತರು ಎಂಬ ಖ್ಯಾತಿಗೆ ಒಳಗಾದ ವ್ಯಕ್ತಿಯಾಗಿದ್ದು, ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. 1967 ಹಾಗೂ 1972ರಲ್ಲಿ ಕಾಂಗ್ರೆಸ್‌ನಿಂದ ಕೆ.ಎನ್‌. ವೀರಪ್ಪಗೌಡ, 1978ರಲ್ಲಿ ಕಾಂಗ್ರೆಸ್‌ನ ಬಿ.ರಾಮಯ್ಯ, 1983ರಲ್ಲಿ ಎಚ್‌.ಜಿ. ಗೋವಿಂದೇಗೌಡ(ಜೆಎನ್‌ಪಿ), 1985ರಲ್ಲಿ ಜೆಎನ್‌ಪಿ ಪಕ್ಷದಿಂದ ಎಚ್‌.ಜಿ. ಗೋವಿಂದೇಗೌಡ, 1989ರಲ್ಲಿ ಕಾಂಗ್ರೆಸ್‌ನ ಯು.ಕೆ. ಶಾಮಣ್ಣ, 1994ರಲ್ಲಿ ಎಚ್‌.ಜಿ. ಗೋವಿಂದೇಗೌಡರು ಜೆಡಿಎಸ್‌ನಿಂದ ಗೆಲುವು ಸಾಧಿಸಿದರು. 1999ರಲ್ಲಿ ಡಿ.ಬಿ. ಚಂದ್ರೇಗೌಡ ಕಾಂಗ್ರೆಸ್‌ನಿಂದ ಆಯ್ಕೆಯಾದರು. 2004, 2008 ಹಾಗೂ 2013ರಲ್ಲಿ ಸತತವಾಗಿ ಬಿಜೆಪಿಯ ಡಿ.ಎನ್‌. ಜೀವರಾಜ್‌ ಹ್ಯಾಟ್ರಿಕ್‌ ಬಾರಿಸಿದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಟಿ.ಡಿ. ರಾಜೇಗೌಡ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಕಡಿದಾಳು ಮಂಜಪ್ಪ, ಎಚ್‌.ಜಿ. ಗೋವಿಂದೇಗೌಡರು, ಡಿ.ಎನ್‌. ಜೀವರಾಜ್‌ ಮೂರು ಬಾರೀ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದು ವಿಶೇಷದ ಜತೆಗೆ 7 ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮತ್ತೂಂದು ವಿಶೇಷವಾಗಿದೆ.

Advertisement

ತರೀಕೆರೆ
ತರೀಕೆರೆ ವಿಧಾನಸಭಾ ಕ್ಷೇತ್ರ ಇದುವರೆಗೂ 15 ಚುನಾವಣೆಗಳನ್ನು ಎದುರಿಸಿದ್ದು, 9 ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 1952ರಲ್ಲಿ ಕೆಎಂಪಿಪಿ ಪಕ್ಷದ ಟಿ.ನಾಗಪ್ಪ, 1957 ಮತ್ತು 1962ರಲ್ಲಿ ಕಾಂಗ್ರೆಸ್‌ನ ಟಿ.ಆರ್‌.ಪರಮೇಶ್ವರಯ್ಯ, 1967ರಲ್ಲಿ ಪಿಎಸ್‌ಪಿ ಪಕ್ಷದಿಂದ ಎಚ್‌.ಶಿವಣ್ಣ, 1972ರಲ್ಲಿ ಕಾಂಗ್ರೆಸ್‌ನಿಂದ ಎಚ್‌.ಶಿವಣ್ಣ, 1978ರಲ್ಲಿ ಕಾಂಗ್ರೆಸ್‌ನ ಎಚ್‌.ಎಂ. ಮಲ್ಲಿಕಾರ್ಜುನಪ್ಪ, 1983ರಲ್ಲಿ ಕಾಂಗ್ರೆಸ್‌ನಿಂದ ಎಚ್‌.ಆರ್‌. ರಾಜು, 1985ರಲ್ಲಿ ಜೆಎನ್‌ಪಿನಿಂದ ಬಿ.ಆರ್‌. ನೀಲಕಂಠಪ್ಪ, 1989ರಲ್ಲಿ ಕಾಂಗ್ರೆಸ್‌ನಿಂದ ಎಚ್‌.ಆರ್‌. ರಾಜು, 1994 ಎಸ್‌.ಎಂ.ನಾಗರಾಜು (ಪಕ್ಷೇತರ), 1999 ಬಿ.ಆರ್‌. ನೀಲಕಂಠಪ್ಪ(ಕಾಂಗ್ರೆಸ್‌), 2004ರಲ್ಲಿ ಟಿ.ಎಚ್‌. ಶಿವಶಂಕರಪ್ಪ (ಕಾಂಗ್ರೆಸ್‌), 2008ರಲ್ಲಿ ಡಿ.ಎಸ್‌. ಸುರೇಶ್‌ (ಬಿಜೆಪಿ), 2013ರಲ್ಲಿ ಜಿ.ಎಚ್‌. ಶ್ರೀನಿವಾಸ್‌ (ಕಾಂಗ್ರೆಸ್‌), 2018ರಲ್ಲಿ ಬಿಜೆಪಿಯಿಂದ ಡಿ.ಎಸ್‌. ಸುರೇಶ್‌ ಆಯ್ಕೆಯಾದರು. ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರ ಕಾಂಗ್ರೆಸ್‌ ಮತ್ತು ಬಿಜೆಪಿಯ ನಡುವಿನ ನೇರ ಹಣಾಹಣಿಯ ಕ್ಷೇತ್ರವಾಗಿದೆ.

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next