ಚಿಕ್ಕೋಡಿ: ದೂಧ ಗಂಗಾ ನದಿ ಪಕ್ಕದಲ್ಲಿರುವ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ 6 ಅಡಿ ಉದ್ದದ ಮೊಸಳೆಯನ್ನು ಯುವಕರ ಗುಂಪು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಬರೋಬ್ಬರಿ 6 ಅಡಿ ಇರುವ ಈ ಮೊಸಳೆಯು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಈ ಮೊಸಳೆಯನ್ನು ಗ್ರಾಮದ ಯುವಕರು ಜೀವಂತವಾಗಿ ಸೆರೆ ಹಿಡಿದು ಕೆಚ್ಚೆದೆಯ ಕಾರ್ಯಕ್ಕೆ ಸಾಕ್ಷಿಯಾಗಿದ್ದು, ಕಾರದಗಾ ಸೇರಿ ಪಕ್ಕದ ಗ್ರಾಮಸ್ಥರು ಕೂಡಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
6 ಅಡಿಯ ಮೊಸಳೆಯನ್ನು ಜಿವಂತವಾಗಿ ಹೆಗಲ ಮೇಲೆ ಹೊತ್ತು ತರುತ್ತಿರುವ ಯುವಕರು, ಮೊಸಳೆಯನ್ನು ನೋಡಲು ಮುಗಿಬಿದ್ದ ಜನರು.
ಹೌದು… ಹೀಗೊಂದು ದೃಶ್ಯ ಕಂಡು ಬಂದಿದ್ದು ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ. ಗುರುವಾರ ಸಂಜೆ ಸಮಯದಲ್ಲಿ ಬಂಡು ಗಾವಡೆ ಎನ್ನುವ ಯುವಕ ಕಾರದಗಾ ಗ್ರಾಮದ ದೂಧಗಂಗಾ ನದಿಯಲ್ಲಿ ಮೀನುಗಾರಿಕೆಗೆ ಜಾಳಿಗೆಯನ್ನು ಹಾಕಿದನು. ಮೀನು ಹಿಡಿಯುತ್ತಿದ್ದ ಸಂಧರ್ಭದಲ್ಲಿ ದೊಡ್ಡ ಮೀನು ಸಿಕ್ಕಿಬಿದ್ದಿದೆ ಎಂದು ಕೊಂಡಿದ್ದನು. ಆದರೆ ಅದು ಮೊಸಳೆಯಾಗಿತ್ತು.ಇದೇ ಸಂಧರ್ಭದಲ್ಲಿ ಹಗ್ಗದಿಂದ ಮೊಸಳೆಯನ್ನು ಕಟ್ಟಿ ಹಾಕಿದ್ದಾನೆ. ನಂತರ ಮೀನುಗಾರ ಬಂಡು ಗಾವಡೆ, ಕಿಸಾಳೆ ಮಧಾಳೆ, ಸುಶಾಂತ ಶಿಂಗೆ, ನಾಗೇಶ ಕಾಂಬಳೆ, ಸಾತಪ್ಪಾ ಡಾಂಗೆ, ನಾಗೇಶ ಕರಾಳೆ, ಭಾವುಸೋ ಗಾವಡೆ, ಪ್ರದೀಪ ಕುರಣೆಯವರು ಎಂಬ ಯುವಕರು ಧೈರ್ಯ ಮಾಡಿ ಮೊಸಳೆಯನ್ನು ಹೊತ್ತು ತಂದು ಗ್ರಾ.ಪಂ ಕಚೇರಿಯ ಮುಂದೆ ತಂದು ಬಿಟ್ಟರು.
ಮೊಸಳೆಯನ್ನು ನೋಡಲು ಜನರು ಮುಗಿಬಿದ್ದರು.. ಮೀನು ಹಿಡಿಯಲು ಹೋದ ಸಂಧರ್ಭದಲ್ಲಿ ಬೃಹತ್ ಗಾತ್ರದ ಮೀನು ಎಂಬಂತೆ ನನಗೆ ಕಂಡು ಬಂತು ಅಸಲಿಗೆ ಅದು ಮೊಸಳೆಯಾಗಿತ್ತು.ಸ್ನೇಹಿತರೆಲ್ಲರು ಸೇರಿಕೊಂಡು ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿದಿದ್ದೇವೆ ಎನ್ನುತ್ತಾರೆ ಮೀನುಗಾರ ಬಂಡು ಗಾವಡೆ.
ಕಳೆದ ಹಲವಾರು ದಿನಗಳಿಂದ ದೂಧಗಂಗಾ ಜಲಾನಯನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಈ ಮೊಸಳೆ ಓಡಾಡಲು ಆರಂಭಿಸಿತ್ತು. ಹೀಗಾಗಿ ನದಿಯ ದಡಕ್ಕೆ ಮೇವು ತರಲು, ರೈತರು ನದಿಯ ದಡದಲ್ಲಿರುವ ಮೊಟಾರ್ ಪಂಪ್ ಸೆಟ್ ಇರುವೆಡೆ ಹೋಗಲು ಭಯಭೀತರಾಗಿದ್ದರು. ಸದ್ಯ ಮೊಸಳೆಯನ್ನು ಜೀವಂತ ಸೆರೆ ಹಿಡಿದಿರುವುದರಿಂದ ಕಾರದಗಾ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೆ ಅಲ್ಲದೆ ಮೊಸಳೆಯನ್ನು ಹಿಡಿದ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಮೊಸಳೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಮೊಸಳೆ ಕಂಡರೆ ಸಾಕು ಭಯಭೀತರಾಗುವ ಈ ಕಾಲದಲ್ಲಿ 6 ಅಡಿಯ ಜೀವಂತ ಮೊಸಳೆಯನ್ನು ಸೆರೆಹಿಡಿದ ಕಾರದಗಾ ಗ್ರಾಮದ ಯುವಕರ ಕಾರ್ಯಕ್ಕೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.