Advertisement

ಚಿಕ್ಕೋಡಿ-ಕೆಲವೇ ವರ್ಷದಲ್ಲಿ ಆರ್ಥಿಕವಾಗಿ ಭಾರತ ನಂ.1: ಜೈಶಂಕರ್‌

05:05 PM Feb 29, 2024 | Team Udayavani |

ಉದಯವಾಣಿ ಸಮಾಚಾರ
ಚಿಕ್ಕೋಡಿ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಜೊತೆಗೆ ವಿಶ್ವದಲ್ಲಿ ಭಾರತ ಐದನೆಯ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ ಹೇಳಿದರು.

Advertisement

ನಗರದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವೇ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಶ್ಲಾಘಿಸಿದರು.

ಭಾರತದಲ್ಲಿ ಮೊದಲು 77 ಪಾಸ್‌ಪೋರ್ಟ್‌ ಕೇಂದ್ರಗಳಿದ್ದವು. ಈಗ 575 ಪಾಸ್‌ಪೋರ್ಟ್‌ ಕೇಂದ್ರಗಳಿವೆ. ಕೋಟ್ಯಂತರ ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರನ್ನು ವಂದೇ ಭಾರತ ಎಂಬ ವೇದಿಕೆಯಡಿಯಲ್ಲಿ ಒಗ್ಗೂಡಿಸಲಾಗಿದೆ.

ವಿದೇಶಗಳಲ್ಲಿ ಅನೇಕ ಕಡೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ನೆಲೆಸುವ ಪ್ರತಿಯೊಬ್ಬ ಭಾರತೀಯನನ್ನು ಕಾಪಾಡುವುದು ನಮ್ಮ ಕರ್ತವ್ಯ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಪ್ರಜೆಗಳಿಗೆ ಪ್ರಧಾನಿ ಮೋದಿ ಮುದ್ರಾ, ಉಜ್ವಲಾ ಯೋಜನೆಯಂತಹ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಭಾರತದಲ್ಲಿ ಡಿಜಿಟಲ್‌ ಇಂಡಿಯಾ ಬಹಳ ಪ್ರಭಾವ ಬೀರಿದೆ. ಅಮೆರಿಕಕ್ಕಿಂತಲೂ ಭಾರತದಲ್ಲಿ ಡಿಜಿಟಲ್‌ ಹೆಚ್ಚು ಉಪಯೋಗವಾಗುತ್ತಿದೆ. ಕೋವಿಡ್‌ ಬಂದಾಗ ಭಾರತ ನಷ್ಟ ಅನುಭವಿಸಲಿದೆ ಎಂದು ಪಾಶ್ಚಿಮಾತ್ಯ ದೇಶಗಳು ಟೀಕಿಸಿದ್ದವು. ವ್ಯಾಕ್ಸಿನ್‌ ಅಂತೂ ಬಹಳ ಕಷ್ಟದ ಕೆಲಸವಾಗಿತ್ತು.ಆದರೆ ಭಾರತ ತನ್ನ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್‌ ನೀಡುವಲ್ಲಿ ಯಶಸ್ವಿಯಾಗಿದೆ. ಇಂದು ಭಾರತದ ಪ್ರಗತಿ ಹಾಗೂ ಉನ್ನತಿ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದರು.

Advertisement

ಶಿಕ್ಷಣದಿಂದ ಮಾತ್ರ ದೇಶ ಉನ್ನತಿ ಹೊಂದಲು ಸಾಧ್ಯ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಿದೆ. ಪ್ರತಿದಿನ ಭಾರತದಲ್ಲಿ 30 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ವಾರಕ್ಕೊಂದರಂತೆ ಹೊಸ
ವಿಶ್ವವಿದ್ಯಾಲಯ ಪ್ರಾರಂಭವಾಗ್ತಿದೆ. ಇವೆಲ್ಲವೂ ಸರ್ಕಾರ ಮಾಡಲೇಬೇಕಾದ ಕೆಲಸಗಳು. ಮುಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ ಆಗಲಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಾಂತ್ರಿಕತೆ, ಎಲೆಕ್ಟ್ರಿಕಲ್‌ ವಾಹನ ಈ ಪೀಳಿಗೆಯ ನಾಡಿಮಿಡಿತವಾಗಿದೆ ಎಂದು
ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next