ಮಹಾದೇವ ಪೂಜೇರಿ
ಚಿಕ್ಕೋಡಿ: ಶಾಂತವಾಗಿ ಹರಿಯಬೇಕಾಗಿದ್ದ ನದಿಗಳು ಕಳೆದ ಒಂದು ವಾರದಿಂದ ಸಾಗರೋಪಾದಿಯಲ್ಲಿ ಹರಿದು ಇತಿಹಾಸ ಕಂಡರಿಯದ ಭೀಕರ ಪ್ರವಾಹ ಎದುರಾಗಿದೆ. ಹೀಗಾಗಿ ಸಂತ್ರಸ್ತರ ಬದುಕು ಅತಂತ್ರವಾಗಿದೆ.
ಮನೆ ಬಿಟ್ಟು ವಾರ ಕಳೆದರೂ ಗ್ರಾಮಗಳಲ್ಲಿಯ ನೀರು ಖಾಲಿಯಾಗುತ್ತಿಲ್ಲ, ಇದು ಸಂತ್ರಸ್ತರಿಗೆ ಮತ್ತಷ್ಟು ಆತಂಕ ಮೂಡಿಸಿದೆ. ಪ್ರವಾಹ ಪೀಡಿತ ಮಕ್ಕಳಿಗೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಭಾಗ್ಯ ಇಲ್ಲದಂತಾಗಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳಲ್ಲಿ ಭಾರಿ ಪ್ರಮಾಣದ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕಿನ ಐದು ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಮತ್ತು ಲಕ್ಷಾಂತರ ಹೆಕ್ಟೇರ್ ಬೆಳೆಗಳು ನೀರಿನಲ್ಲಿ ಹಾಳಾಗಿ ಹೋಗಿವೆ. ಇದರಿಂದ ಮುಳುಗಡೆಗೊಂಡ ಸಂತ್ರಸ್ತರ ಬದುಕು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಿಂದ ತತ್ತರಿಸಿ ಹೋಗಿ ಮನೆ ಬಿಟ್ಟು ಒಂದು ವಾರ ಕಳೆದಿದೆ. ಮನೆ ಹೇಗಿದೆ, ಮನೆಯಲ್ಲಿರುವ ವಸ್ತುಗಳು ಹೇಗಿವೆ ಎಂಬ ಒಂದೇ ವಿಚಾರ ಸಂತ್ರಸ್ತರನ್ನು ಪದೇ ಪದೇ ಕಾಡತೊಡಗಿದೆ.
ಇನ್ನೂ ನೀರಲ್ಲಿ ಗ್ರಾಮಗಳು: ಗಡಿ ಭಾಗದ ನಾಲ್ಕು ನದಿಗಳಲ್ಲಿ ಅಬ್ಬರಿಸಿದ ಪ್ರವಾಹ ಜನರ ರಕ್ತ ಹಿರಿದೆ. ನಾಲ್ಕು ದಿನ ಅಬ್ಬರಿಸಿ ಪ್ರವಾಹ ಕಡಿಮೆಯಾಗಿದೆ. ಆದರೆ ನದಿ ನೀರಿನ ಪ್ರಮಾಣದಲ್ಲಿ ಮಾತ್ರ ಗಣನೀಯ ಇಳಿಕೆ ಕಾಣುತ್ತಿಲ್ಲ, ಪ್ರವಾಹ ಕಡಿಮೆಯಾಗಿರುವುದು ಸಂತ್ರಸ್ತರಲ್ಲಿ ನಿರಾಳ ಮೂಡಿಸಿದೆ. ಆದರೂ ಗ್ರಾಮಗಳಲ್ಲಿ ಇನ್ನೂ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದ ಬಹಳಷ್ಟು ದಿನ ನೀರಿನಲ್ಲಿ ನಿಂತ ಮನೆಗಳು ಕುಸಿಯುತ್ತವೆ ಎಂಬ ಭಯ ಸಂತ್ರಸ್ತರನ್ನು ಕಾಡತೊಡಗಿದೆ.
ಶಾಶ್ವತ ಪರಿಹಾರ ಕಲ್ಪಿಸಿ: ಈಗ ನಮ್ಮ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈಗ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಉಟ್ಟ ಬಟ್ಟೆ ಮೇಲೆ ಮನೆ ಬಿಟ್ಟು ಬಂದಿದ್ದೇವೆ. ಈಗ ಮನೆಗಳು ನಡು ನೀರಿನಲ್ಲಿ ನಿಂತುಕೊಂಡಿವೆ. ನೀರು ಕಡಿಮೆಯಾದ ಮೇಲೆ ಮನೆ ಬೀಳುವ ಆತಂಕ ಇದೆ. ಕೂಡಲೇ ಸರ್ಕಾರ ಧನ ಸಹಾಯ ಮಾಡುವ ಬದಲು ಶಾಶ್ವತ ಪರಿಹಾರ ಕಂಡುಕೊಂಡು ಸೂಕ್ತ ಜಾಗದಲ್ಲಿ ಮನೆ ಕಟ್ಟಿಸಿಕೊಡಬೇಕು. ನಾವು ದುಡಿದು ನಮ್ಮ ಜೀವನ ರೂಪಿಸಿಕೊಳ್ಳುತ್ತೇವೆ. ಆದರೆ ಈ ತರಹ ಕೈಒಡ್ಡಿ ಬೇಡುವ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಸಂತ್ರಸ್ತ ಮಹಿಳೆ ಗಜುಬಾಯಿ ದೊಡಮನಿ ಕಣ್ಣಿರು ಹಾಕುತ್ತಾರೆ.
ಪುನರ್ವಸತಿ ಕಲ್ಪಿಸಿ: ಕೃಷ್ಣಾ ನದಿಗೆ ಇಷ್ಟೊಂದು ಪ್ರಮಾಣದ ನೀರು ಬರುತ್ತದೆಂದು ನಾವು ಊಹಿಸಿರಲಿಲ್ಲ, ಈ ಹಿಂದೆ 2005ರಲ್ಲಿ ಪ್ರವಾಹ ಬಂದು ನಮ್ಮ ಬದುಕು ಕಸಿದುಕೊಂಡಿತ್ತು. ಈಗ ಮತ್ತೂಮ್ಮೆ ನಮ್ಮ ಜೀವನ ಹಾಳಾಗಿದೆ. ಇಲ್ಲಿಯವರೆಗೆ ದುಡಿದು ಕಟ್ಟಿಸಿದ ಮನೆ ನೀರಿನಲ್ಲಿ ಮುಳುಗಿ ಹೋಗಿದೆ. ಈಗ ಪುನರ್ವವಸತಿ ಕಲ್ಪಿಸಿ ನಮಗೆ ಸೂಕ್ತ ಪರಿಹಾರ ಕೊಡಬೇಕೆಂದು ಸಂತ್ರಸ್ತ ಮಹಿಳೆ ಎಸ್.ಪಿ. ಕಾಂಬಳೆ ಅಳಲು ಹೇಳುತ್ತಾರೆ.
ಜನರ ಮಗ್ಗಲು ಮುರಿದ ಪ್ರವಾಹ: ಮಹಾ ಮಳೆ ಮತ್ತು ವಿವಿಧ ಡ್ಯಾಂಗಳಿಂದ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಹ ಎದುರಾಗಿ ನಮ್ಮ ಮಗ್ಗಲು ಮುರಿಯುತ್ತಿದೆ ಎಂದು ಊಹಿಸಿರಲಿಲ್ಲ, ನಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಮೇಲಿನ ಅಂತಸ್ತಿನಲ್ಲಿ ಇಟ್ಟು ಕೀಲಿ ಹಾಕಿ ಬಂದಿದ್ದೇವೆ. ಆದರೆ ಭೀಕರ ಪ್ರವಾಹ ಮೇಲಿನ ಅಂತಸ್ತನ್ನೂ ದಾಟಿ ನುಗ್ಗಿ ಅಪಾರ ಹಾನಿ ಮಾಡಿದೆ. ನಾವು ಸುಧಾರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕಾಗಬಹುದು ಎಂದು ಕಲ್ಲೋಳ ಗ್ರಾಮಸ್ಥ ತುಕಾರಾಮ ಕೋಳಿ ಮಮ್ಮಲನೆ ಮರುಗುತ್ತಾರೆ.