Advertisement

ಜಾನುವಾರು ಬೇನೆಗೆ ರೈತ ತತ್ತರ

11:31 AM Jan 12, 2019 | Team Udayavani |

ಚಿಕ್ಕೋಡಿ: ಜಾನುವಾರುಗಳಿಗೆ ವ್ಯಾಪಕವಾಗಿ ಹರಡಿರುವ ಕಾಲು-ಬಾಯಿ ಬೇನೆ ಮಹಾಮಾರಿ ರೋಗಕ್ಕೆ ತಾಲೂಕಿನ ಮುಗಳಿ ಗ್ರಾಮದ ರೈತರು ತತ್ತರಿಸಿ ಹೋಗಿದ್ದು, ಗ್ರಾಮದ ಹತ್ತಾರು ಕುಟುಂಬಗಳ ನೂರಕ್ಕೂ ಹೆಚ್ಚಿನ ರಾಸುಗಳು ರೋಗಕ್ಕೆ ಬಲಿಯಾಗಿವೆ.

Advertisement

ಕಳೆದ ಒಂದು ತಿಂಗಳಿಂದ ರೋಗ ಗಡಿ ಜಿಲ್ಲೆಗೆ ಹರಡಿದ್ದು, ಮುಗಳಿ ಗ್ರಾಮವೊಂದರಲ್ಲಿಯೇ ನೂರಕ್ಕೂ ಹೆಚ್ಚಿನ ಜಾನುವಾರಗಳು ರೋಗಕ್ಕೆ ತುತ್ತಾಗಿದ್ದು, ಸರ್ಕಾರವೇ ದನಕರುಗಳ ಸಾವಿಗೆ ಕಾರಣವಾಗಿದೆಂದು ಗ್ರಾಮಸ್ಥರು ಪಶು ಸಂಗೋಪನಾ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಪಶು ಆಸ್ಪತ್ರೆ ಇಲ್ಲದೇ ಇರುವುದಕ್ಕೆ ಇಷ್ಟೊಂದು ಜಾನುವಾರಗಳು ಸಾವಿನ ಕದ ತಟ್ಟಿದ್ದು, ಇನ್ನೂ ಹಲವು ದನಕರುಗಳು ಸೂಕ್ತ ಚಿಕಿತ್ಸೆ ಇಲ್ಲದೇ ಒದ್ದಾಡುತ್ತಿವೆ ಎಂದು ಗ್ರಾಮದ ರೈತರು ದೂರಿದರು.

ತೀವ್ರ ಬರಗಾಲ ಪೀಡಿತ ಪ್ರದೇಶವಾಗಿರುವ ಗ್ರಾಮದಲ್ಲಿ ಕಳೆದ ಐದಾರು ವರ್ಷಗಳಿಂದ ಸಮರ್ಪಕ ಮಳೆ ಆಗಿಲ್ಲ, ಇದರಿಂದ ಬರಗಾಲಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾಮಾರಿ ಕಾಲು-ಬಾಯಿ ಬೇನೆ ವಕ್ಕರಿಸಿ ರೈತರ ಹೊಟ್ಟೆಗೆ ಬರೆ ಎಳೆದಂತಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿಯೇ ಅತಿ ಹೆಚ್ಚಾಗಿ ಹೈನುಗಾರಿಕೆ ಹೊಂದಿರುವ ಮುಗಳಿ ಗ್ರಾಮದಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಅಧಿಕ ಜಾನುವಾರುಗಳು ಇದ್ದು, ಇಲ್ಲಿ ಪಶು ಆಸ್ಪತ್ರೆ ಇದ್ದರೆ ರೋಗ ಗುಣಪಡಿಸಬಹುದಾಗಿತ್ತು. ಆದರೆ ಸರ್ಕಾರ ಮಾತ್ರ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಮೀನಮೇಷ ಮಾಡುತ್ತಿದೆ ಎಂದು ರೈತ ರಾಜು ಹರಗನ್ನವರ ಆರೋಪಿಸಿದರು.

ರೋಗದ ಲಕ್ಷಣ ಕಂಡ ತಕ್ಷಣಾ ರೋಗಗ್ರಸ್ತ ಪ್ರಾಣಿಯನ್ನು ಇತರ ಜಾನುವಾರುಗಳಿಂದ ಬೇರ್ಪಡಿಸಬೇಕು. ಅಲ್ಲದೇ ನಿತ್ಯ ಕೊಟ್ಟಿಗೆಯನ್ನು ಶುಚಿಗೊಳಿಸಿ ಕಟ್ಟುವುದರಿಂದ ಇತರ ಪ್ರಾಣಿಗಳಿಗೆ ಕಾಯಿಲೆ ಹರಡದಂತೆ ತಡೆಯಬಹುದಾಗಿದೆ. ರೋಗಗ್ರಸ್ತ ಪ್ರಾಣಿಯಿಂದ ಈ ಅಂಟು ರೋಗವು ಬೇಗನೆ ಇತರೆಡೆಗೆ ವ್ಯಾಪಿಸುವುದರಿಂದ ಈ ರಾಸುಗಳನ್ನು ಮಾರಾಟ ಮಾಡಬಾರದು. ಕಾಯಿಲೆಗೆ ತುತ್ತಾದ ಜಾನುವಾರಿನ ಕಾಲು ಬಾಯಿ ಹುಣ್ಣನ್ನು ಸ್ವಲ್ಪ ಅಡುಗೆ ಸೋಡ ದ್ರಾವಣದಿಂದ ಶುಚಿಗೊಳಿಸುವುದು. ಮೃದು ಆಹಾರ ನೀಡುವುದು. ವಿಟಮಿನ್‌ ಲಸಿಕೆ ಕೊಡಿಸುವ ಮೂಲಕ ಆರೈಕೆ ಮಾಡಬೇಕು ಎನ್ನುತ್ತಾರೆ ಪಶು ವೈದ್ಯರು.

ರೋಗದ ಲಕ್ಷಣ
ಕಾಲು ಮತ್ತು ಬಾಯಿ ಜ್ವರಕ್ಕೆ ತುತ್ತಾದ ಜಾನುವಾರಗಳಲ್ಲಿ ಅತಿಯಾದ ಜ್ವರ, ಬಾಯಿಯಲ್ಲಿ ನೀರ್ಗುಳ್ಳೆ, ಜೊಲ್ಲು ಸುರಿಸುವುದು. ಕಾಲು ಕುಂಟುವುದು ಹಾಗೂ ಕೆಚ್ಚಲಿನ ಮೇಲೆ ಗುಳ್ಳೆಗಳು ಮೂಡುವುದು ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತವೆ.

Advertisement

ಪ್ರತಿ ವರ್ಷ ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗ ಬರದಂತೆ ಪಶುಸಂಗೋಪನಾ ಇಲಾಖೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಲಸಿಕೆ ಕೊಡಿಸಿದೆ. ರೋಗಕ್ಕೆ ತುತ್ತಾಗಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಚಳಿ ಹೆಚ್ಚಾಗಿ ಇರುವುದರಿಂದ ಶೇ 30ರಷ್ಟು ಕರುಗಳ ಸಾವಿನ ಪ್ರಮಾಣ ಹೆಚ್ಚಿತ್ತದೆ. ಮುಗಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
•ಡಾ. ಸದಾಶಿವ ಉಪ್ಪಾರ,
ತಾಲೂಕು ಆರೋಗ್ಯಾಧಿಕಾರಿ,
ಪಶು ಸಂಗೋಪನಾ ಇಲಾಖೆ ಚಿಕ್ಕೋಡಿ

ಜಾನುವಾರುಗಳನ್ನೇ ನಂಬಿಕೊಂಡಿರುವ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಕಾಲುಬಾಯಿ ಬೇನೆ ರೋಗಕ್ಕೆ ನಮ್ಮ ಜಾನುವಾರುಗಳು ಮೃತಪಟ್ಟಿವೆ. ಸರ್ಕಾರ ಗ್ರಾಮದಲ್ಲಿ ಪಶು ಆಸ್ಪತ್ರೆ ಆರಂಭಿಸಿ ವೈದ್ಯರ ನೇಮಕ ಮಾಡಬೇಕು.
•ಗಣಪತಿ ಬಡಿಗೇರ,
ಮುಗಳಿ ಗ್ರಾಮದ ರೈತ.
ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next