Advertisement

ಚಿಕ್ಕೋಡಿ: ಬೇಕಾಬಿಟ್ಟಿ ಪಾರ್ಕಿಂಗ್‌- ಪಾದಚಾರಿ-ಸವಾರರಿಗೆ ಕಿರಿಕಿರಿ

05:56 PM Jun 19, 2023 | Team Udayavani |

ಚಿಕ್ಕೋಡಿ: ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದಿರುವ ಚಿಕ್ಕೊಡಿ ನಗರದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್‌ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಬಾರಿ ತಲೆನೋವಾಗಿ ಪರಿಣಮಿಸಿದೆ.

Advertisement

ನಗರದ ಪ್ರವಾಸಿ ಮಂದಿರದಿಂದ ಬಸವ ಸರ್ಕಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆ ಮಾಡುವುದರಿಂದ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುವುದು ಕಷ್ಟವಾಗಿದೆ. ಸಾರ್ವಜನಿಕರು ಸ್ವಲ್ಪ
ಯಾಮಾರಿದರೆ ಜೀವಕ್ಕೆ ಕುತ್ತು ಬರುವುದು ಗ್ಯಾರಂಟಿ.

ನಡು ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವುದರಿಂದ ಭಾರಿ ಗಾತ್ರದ ವಾಹನಗಳು ಸಂಚಾರ ಮಾಡುವುದು ಕಷ್ಟವಾಗಿದೆ. ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಹಾಯ್ದುಹೋಗಿದೆ. ಸದ್ಯ ಇದು ಮೇಲ್ದರ್ಜೆಗೊಂಡು ರಾಷ್ಟ್ರೀಯ ಹೆದ್ದಾರಿಯಾಗಿ
ರೂಪುಗೊಂಡಿದೆ. ಈ ರಸ್ತೆಯ ಪಕ್ಕದಲ್ಲಿ ನ್ಯಾಯಾಲಯ, ಅಂಚೆ ಕಚೇರಿ, ಪ್ರವಾಸಿ ಮಂದಿರ, ಲೋಕೋಪಯೋಗಿ ಇಲಾಖೆ
ಇದ್ದು, ಮುಂಭಾಗದಲ್ಲಿ ವಿವಿಧ ವ್ಯಾಪಾರ ಮಳಿಗೆಗಳು ಇರುತ್ತವೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ರಾಷ್ಟ್ರಿಯ ಹೆದ್ದಾರಿ ಎರಡು ಬದಿಯ ಮಧ್ಯದವರೆಗೂ ವಾಹನ ಪಾರ್ಕಿಂಗ್‌ ಮಾಡುವುದರಿಂದ ಬಸ್‌,ಲಾರಿ, ಕಾರು ಮತ್ತು ಸಾರ್ವಜನಿಕರಿಗೆ ಭಾರಿ ಸಮಸ್ಯೆ ಎದುರಾಗಿದೆ.

ಬಸವ ಸರ್ಕಲ್‌ದಿಂದ ಅಂಕಲಿಕೂಟದವರೆಗೆ ಮತ್ತೊಂದು ದೊಡ್ಡ ಸಂಚಾರ ದಟ್ಟಣೆ ಸಮಸ್ಯೆ ಚಿಕ್ಕೋಡಿ ನಗರದ ಜನರನ್ನು ಕಾಡತೊಡಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಹೆಚ್ಚು ಹೆಚ್ಚು ವಾಹನಗಳ ಓಡಾಟವೇ ಜನರ ನಿದ್ದೆಗೆಡಿಸಿದೆ. ರಸ್ತೆಯ ಪಕ್ಕದಲ್ಲಿಯೂ ಪಾದಚಾರಿ ನಡೆದಾಡುವುದು ಕಷ್ಟವಾಗಿ ಪರಿಣಮಿಸಿದೆ.

ಕೆಸಿ ರಸ್ತೆಯನ್ನೇ ಬಾಚಿಕೊಂಡ ವ್ಯಾಪಾರಸ್ಥರು:
ಚಿಕ್ಕೋಡಿ ನಗರದ ಕಿತ್ತೂರ ಚನ್ನಮ್ಮ ರಸ್ತೆಯ ಪಕ್ಕದಲ್ಲಿ ಇದ್ದುಕೊಂಡು ಹಣ್ಣಿನ ವ್ಯಾಪಾರ ಮಾಡುವುದನ್ನು ಬಿಟ್ಟು ನಡು
ರಸ್ತೆಯದ್ದುದ್ದಕ್ಕೂ ಒತ್ತು ಗಾಡಿಗಳನ್ನು ನಿಲ್ಲಿಸಿ ಹಣ್ಣಿನ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯ ಬಿಳಿ ಬಣ್ಣದ ಆಚೆ ವ್ಯಾಪಾರ ಮಾಡಬೇಕೆಂದು ಅಧಿಕಾರಿಗಳು ಸೂಚನೆ ನೀಡಿದರೂ ಸಹ ದಿನಸಿ ವ್ಯಾಪಾರಸ್ಥರು ನಡು ರಸ್ತೆಯವರೆಗೆ ಬಂದು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಚಿಕ್ಕೋಡಿಯಲ್ಲಿ ಎದುರಾಗಿರುವ ಸೂಕ್ತ ಪಾರ್ಕಿಂಗ್‌ ಸಮಸ್ಯೆ ಮತ್ತು ಟ್ರಾಫಿಕ್‌ ಸಮಸ್ಯೆ ಬಗೆಹರಿಸುವತ್ತ ಸಂಚಾರಿ ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳು ಸೂಕ್ತ ಗಮನ ಹರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

Advertisement

ಚಿಕ್ಕೋಡಿ ನಗರದ ಬಸವ ಸರ್ಕಲ್‌ದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಮಧ್ಯದವರೆಗೂ ದ್ವಿಚಕ್ರ ವಾಹನ ನಿಲುಗಡೆಯಿಂದ ಭಾರಿ ಗಾತ್ರದ ವಾಹನ ಸಂಚಾರ ಮಾಡುವುದು ಕಷ್ಟವಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ಇರುವ ಪಾದಚಾರಿಗಳಿಗೂ ಸಮಸ್ಯೆಯಾಗುತ್ತದೆ. ಸ್ವಲ್ಪ ಚಾಲಕನ ನಿಯಂತ್ರಣ ತಪ್ಪಿದರೆ ಪಾದಚಾರಿ ಮತ್ತು ಬೈಕ್‌ಗಳಿಗೆ ವಾಹನ ತಾಗುವ ಸಂಭವ ಇರುತ್ತದೆ.
ಉಮೇಶ, ಲಾರಿ ವಾಹನ ಚಾಲಕ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next