ಚಿಕ್ಕಮಗಳೂರು: ಮಳೆಯ ಅಬ್ಬರಕ್ಕೆ ಮಲೆನಾಡು ಹೊರಗಿನ ಜಗತ್ತಿನ ಕೊಂಡಿಯನ್ನೇ ಕಳೆದುಕೊಳ್ಳುತ್ತಿದೆ. ಜನರು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ದಿನದೂಡುವಂತಾಗಿದೆ. ವಾರಗಟ್ಟಲೇ ಕರೆಂಟ್ ಇಲ್ಲದೆ ನೆಟ್ ವರ್ಕ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದು ಮೊಬೈಲ್ ಚಾರ್ಜ್ ಮಾಡಲು ಜನರೇಟರ್ ಮೊರೆ ಹೋಗುತ್ತಿದ್ದಾರೆ.
ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ಹಲವೆಡೆ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಆದರೂ ಬಿಎಸ್ಎನ್ಎಲ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳ ನೆಟ್ ವರ್ಕ್ ಇಲ್ಲವಾಗಿದೆ.
ಮಳೆಯ ಆರ್ಭಟಕ್ಕೆ ವಿದ್ಯುತ್ ಇಲ್ಲದಂತಾಗಿದ್ದು ದುರಸ್ಥಿ ಕಾರ್ಯಕ್ಕೆ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಪ್ರಾಣವನ್ನು ಪಣಕ್ಕಿಟ್ಟು ಸರಿಪಡಿಸಲು ಮುಂದಾಗುತ್ತಿದ್ದಾರೆ. ಬಾಳೆಹೊನ್ನೂರು ಗಡಿಗೇಶ್ವರ ಬಳಿ ಹೊಳೆಯಲ್ಲಿ ಮುಳುಗಿದ್ದ ವಿದ್ಯುತ್ ತಂತಿಗಳನ್ನು ಪ್ರಾಣದ ಹಂಗು ತೊರೆದು ಜೆ.ಇ.ಗಣೇಶ್, ಕಾಂತರಾಜು, ಶವಕುಮಾರ್ ತೆಪ್ಪದಲ್ಲಿ ತೆರಳಿ ವಿದ್ಯುತ್ ಸರಿಪಡಿಸಲು ಮುಂದಾಗಿದ್ದು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಭದ್ರಾನದಿ ಉಕ್ಕಿ ಹರಿದಿದ್ದು ಬಾಳೆಹೊನ್ನೂರು, ಕೊಟ್ಟಿಗೆಹಾರ, ಕಳಸ ಸಂಪರ್ಕಿಸುವ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ಅಯ್ಯನಕೆರೆ ಮತ್ತು ಮದಗದ ಕರೆ ಕೋಡಿ ಬಿದ್ದಿದ್ದು ಕೆರೆ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ತೋಟಗಳಲ್ಲಿ ಎದೆ ಮಟ್ಟಕ್ಕೆ ನೀರು ಹರಿಯುತ್ತಿದೆ.
ಕೆರೆ ಕೋಡಿ ಬಿದ್ದಿರುವ ಹಿನ್ನಲೆ ಜನರು ಮೀನು ಹಿಡಿಯಲು ಮುಗಿಬಿದ್ದು ಪೈಪೋಟಿ ನಡೆಸುತ್ತಿದ್ದಾರೆ. ತರೀಕೆರೆ ತಾಲೂಕಿನ ದೊಡ್ಡಕೆರೆ ಎರಡು ವರ್ಷಗಳ ಬಳಿಕ ಕೋಡಿ ಬಿದ್ದಿದ್ದು ಕೆಲಸ ಬಿಟ್ಟು ಮೀನು ಹಿಡಿಯಲು ಜನರು ಧಾವಿಸುತ್ತಿದ್ದಾರೆ.