Advertisement

ಸುರಿವ ಮಳೆಯಲ್ಲೇ ಸ್ವಚ್ಛಮೇವ ಜಯತೆ

11:37 AM Jun 27, 2019 | Team Udayavani |

ಚಿಕ್ಕಮಗಳೂರು: ಸುರಿಯುತ್ತಿದ್ದ ಮಳೆ, ಗಾಳಿ, ಚಳಿಯಲ್ಲಿಯೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

Advertisement

ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಐ.ಡಿ.ಪೀಠ ಗ್ರಾಮ ಪಂಚಾಯತ್‌, ಐಡಿಎಸ್‌ಜಿ ಕಾಲೇಜು ಎನ್‌ಎಸ್‌ಎಸ್‌ ಘಟಕ ಇನ್ನಿತರೆ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಐ.ಡಿ.ಪೀಠದ ಮಾಣಿಕ್ಯಧಾರಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸ್ವಚ್ಛಮೇವ ಜಯತೆ’ ಸ್ವಚ್ಛತಾ ಆಂದೋಲನದಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು.

ಬುಧವಾರ ಬೆಳಗಿನಿಂದಲೇ ಮಾಣಿಕ್ಯಧಾರಾ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿತ್ತು. ಭಾರೀ ಗಾಳಿಯೂ ಬೀಸುತ್ತಿತ್ತು. ಆದರೂ ಧೃತಿಗೆಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಳಗಿನಿಂದ ಸಂಜೆವರೆಗೂ ಸ್ವಚ್ಛತಾ ಕಾರ್ಯ ನಡೆಸಿದರು.

ಮಾಣಿಕ್ಯಧಾರಾಕ್ಕೆ ತಲುಪಿದ ಕೂಡಲೇ ಎಲ್ಲೆಡೆ ಪ್ಲಾಸ್ಟಿಕ್‌ ಬಾಟಲ್ಗಳು, ಬಟ್ಟೆಗಳು ಬಿದ್ದಿದ್ದವು. ಅದನ್ನು ನೋಡಿದ ಕೂಡಲೇ, ಇದು ಒಂದು ದಿನಕ್ಕೆ ಆಗುವ ಕೆಲಸವಲ್ಲ.ಪೂರ್ಣ ಸ್ವಚ್ಛಗೊಳಿಸಲು ಕನಿಷ್ಠ 15 ದಿನಗಳಾದರೂ ಬೇಕೆಂಬ ಭಾವನೆ ಎಲ್ಲರಲ್ಲೂ ಮೂಡಿತು. ಹವಾಮಾನವೂ ಪೂರಕವಾಗಿರಲಿಲ್ಲ. ಆದರೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ವಚ್ಛತಾ ಕಾರ್ಯವನ್ನು ಆರಂಭಿಸಿ ಎಲ್ಲೆಡೆ ಬಿದ್ದಿದ್ದ ಪ್ಲಾಸ್ಟಿಕ್‌ ಬಾಟಲ್, ಬಟ್ಟೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಪತ್ರಕರ್ತ, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾ ಶಂಕರ, ವಿಶ್ವದಲ್ಲಿಯೇ ಪ್ರಖ್ಯಾತವಾಗಿರುವ ಪಶ್ಚಿಮಘಟ್ಟ ಪ್ರದೇಶಗಳನ್ನು ಒಮ್ಮೆ ಕಳೆದುಕೊಂಡರೆ ಅದನ್ನು ಪುನಃ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಸೂಕ್ಷ ್ಮ ಪ್ರದೇಶವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

Advertisement

ಶೋಲಾ ಕಾಡುಗಳನ್ನು ಹೊಂದಿರುವ ಇಂತಹ ಸೂಕ್ಷ ್ಮಪ್ರದೇಶದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಹಾಕಲಾಗುತ್ತಿದೆ. ಇದನ್ನು ತಡೆಗಟ್ಟುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಗ್ರಾಮ ಪಂಚಾಯತ್‌ ಜವಾಬ್ದಾರಿ ಬಹಳ ಪ್ರಮುಖವಾಗಿದೆ. ನಮ್ಮ ಜನರಿಗೆ ತಿಳಿವಳಿಕೆ ಹೇಳಿದರೆ ಪ್ರಯೋಜನವಾಗುವುದಿಲ್ಲ. ಅದರ ಬದಲು ತ್ಯಾಜ್ಯವನ್ನು ಹಾಕುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಕೆಲಸ ಮಾಡಬೇಕು. ಆಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಶಿಲ್ಪಾ ಮಾತನಾಡಿ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಇಂದು ಮಾಡುತ್ತಿರುವ ಕೆಲಸ ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಕೆಲಸ ಮಾಡುವ ಮೂಲಕ ಪ್ರಾಣಿ, ಪಕ್ಷಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇದು ನಿರಂತರವಾಗಿ ನಡೆಯಬೇಕೆಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಹುಲ್ಲಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಇಂದು ಮಾಡುತ್ತಿರುವ ಕೆಲಸ ಉತ್ತಮ ಕಾರ್ಯವಾಗಿದೆ. ತಾವೂ ಪರಿಸರ ಉಳಿಸುವುದಲ್ಲದೇ, ಬೇರೆಯವರಿಗೂ ಪ್ರೇರೇಪಣೆ ನೀಡಬೇಕೆಂದರು.

ಐ.ಡಿ.ಪೀಠ ಗ್ರಾಪಂ ಪಿಡಿಒ ರಾಜ್‌ಕುಮಾರ್‌ ಮಾತನಾಡಿ, ದೇಶದಲ್ಲಿ ಪರಿಸರವನ್ನು ಮಲೀನಗೊಳಿಸುವ ಕೆಲಸವನ್ನು ಪ್ರಾಣಿ, ಪಕ್ಷಿಗಳು ಮಾಡುತ್ತಿಲ್ಲ. ಇದೆಲ್ಲವನ್ನೂ ಮಾನವನೇ ಮಾಡುತ್ತಿದ್ದಾನೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ಪ್ರಾಣಿಯಂತೆ ವರ್ತಿಸುವ ಅಗತ್ಯವಿದೆ ಎಂದರು.

ಇತ್ತೀಚೆಗೆ ಈ ಭಾಗದಲ್ಲಿ 3ಹಸುಗಳು ಸಾವಪ್ಪಿದ್ದವು. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಹಸುಗಳ ದೇಹದಲ್ಲಿ 25-30 ಕೆಜಿ ಪ್ಲಾಸ್ಟಿಕ್‌ ಪದಾರ್ಥಗಳು ದೊರೆತಿವೆ ಎಂದು ತಿಳಿಸಿದರು. ಈ ಭಾಗದಲ್ಲಿ ಪರಿಸರ ಎಷ್ಟು ಮಲೀನವಾಗಿದೆ ಎಂಬುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನಿಗೂ ಪ್ಲಾಸ್ಟಿಕ್‌ ಬಳಸದಂತೆ ತಿಳಿಸಲು ಸಾಧ್ಯವಾಗುವುದಿಲ್ಲ. ಇಂದು ಸ್ವಚ್ಛತಾ ಕಾರ್ಯ ನಡೆಸುತ್ತಿರುವ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಅಭಿಯಾನ ನಡೆಸಬೇಕೆಂದು ಕೋರಿದರು. ಐಡಿಎಸ್‌ಜಿ ಕಾಲೇಜು ಎನ್‌ಎಸ್‌ಎಸ್‌ ಅಧಿಕಾರಿ ಲಕ್ಷ್ಮೀ ಕಾಂತ್‌ ಇತರರು ಉಪಸ್ಥಿತರಿದ್ದರು.

ಪರಿಸರ ಉಳಿಸುವ ಜವಾಬ್ದಾರಿ ಅರಣ್ಯ ಇಲಾಖೆ ಮತ್ತು ಸರ್ಕಾರದ್ದು ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಆದರೆ, ಅದು ತಪ್ಪು ಅಭಿಪ್ರಾಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವ ಹಕ್ಕನ್ನು ಪ್ರತಿಯೊಬ್ಬರಿಗೂ ನೀಡಲಾಗಿದೆ. ಅದೇ ರೀತಿ, ಪರಿಸರವನ್ನು ಉಳಿಸಿ, ಬೆಳೆಸುವ ಕರ್ತವ್ಯವೂ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ.
ಶಿಲ್ಪಾ, ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next