ಚಿಕ್ಕಮಗಳೂರು: ಜಿಲ್ಲೆಯ ಬಯಲು ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆ ನಾಶವಾಗುವ ಭೀತಿಯಲ್ಲಿರುವ ರೈತರು, ಭರವಸೆಯ ರಾಗಿ ಬೆಳೆ ಬಗ್ಗೆ ಮಾತ್ರ ಆಶಾವಾದ ಹೊಂದಿದ್ದಾರೆ.
Advertisement
ಬಯಲು ಪ್ರದೇಶದ ಕಡೂರು, ತರೀಕೆರೆ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಲ್ಲಿ ಮಳೆ ಕೊರತೆಯಿಂದ ಈಗಾಗಲೇ ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ತೊಗರಿ, ಅಲಸಂದೆ ಬೆಳೆ ಬಿತ್ತನೆಯಾಗಿದ್ದರೂ ನಾಶವಾಗಿವೆ.
Related Articles
Advertisement
ಕಳೆದ ವರ್ಷ ಜೂನ್ ತಿಂಗಳಲ್ಲೇ ಜಿಲ್ಲಾದ್ಯಂತ ಮುಂಗಾರು ಬಿರುಸಿನಿಂದ ಬಂದಿತ್ತು. ಆ ಹಿನ್ನೆಲೆಯಲ್ಲಿ ಬಿತ್ತನೆ ಸಹ ಚುರುಕಾಗಿತ್ತು. ಜುಲೈ ತಿಂಗಳ ಅಂತ್ಯಕ್ಕೆ ರಾಗಿ, ಭತ್ತ ಹೊರತುಪಡಿಸಿ ಶೇ.29ರಷ್ಟು ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿತ್ತು. ಈ ವರ್ಷ ಸಹ ಉತ್ತಮ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ರೈತರು ಮುಂಗಾರು ಪೂರ್ವದಲ್ಲೇ ತಮ್ಮ ಭೂಮಿ ಸಿದ್ಧಪಡಿಸಿಕೊಂಡು ಬಂದ ಮಳೆಗೆ ಸ್ವಲ್ಪ ಧಾನ್ಯ ಬಿತ್ತಿದ್ದರು. ಆದರೆ, ಮಳೆ ನಂತರ ಕೈಕೊಟ್ಟಿತ್ತು.
ಈ ವರ್ಷ ಕೃಷಿ ಇಲಾಖೆ ಜಿಲ್ಲಾದ್ಯಂತ 1,32,350 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ನಿಗದಿ ಮಾಡಿಕೊಂಡಿತ್ತು. ಆದರೆ, ಮಳೆ ಅಭಾವದಿಂದ ಈವರೆಗೆ 18,830 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲು ಸಾಧ್ಯವಾಗಿದೆ. ಪ್ರಸಕ್ತ ವರ್ಷ ಈವರೆಗೆ ಶೇ.14.2ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿ ಸತತ ಮುಂಗಾರು ಮಳೆಯಲ್ಲಿ ಜಿಲ್ಲೆ ತೊಯ್ದುಹೋಗುತ್ತದೆ. ಆದರೆ, ಈ ವರ್ಷ ಈ ಎರಡೂ ತಿಂಗಳಲ್ಲಿ ಯಾವ ತಾಲೂಕಿನಲ್ಲೂ ವಾಡಿಕೆ ಮಳೆಯೂ ಬಂದಿಲ್ಲ. ಎಲ್ಲ ತಾಲೂಕುಗಳು ಮಳೆ ಕೊರತೆ ಅನುಭವಿಸುತ್ತಿವೆ.
ಎಣ್ಣೆಕಾಳು ಬೆಳೆಯೂ ನಾಶಎಣ್ಣೆಕಾಳುಗಳಲ್ಲಿ ನೆಲಗಡಲೆ, ಎಳ್ಳು, ಸೂರ್ಯಕಾಂತಿ ಬಿತ್ತನೆ 3,803 ಹೆಕ್ಟೇರ್‌ನಲ್ಲಿ ಆಗಿತ್ತು. ರೈತನ ಜೇಬು ತುಂಬಿಸುವ ಎಣ್ಣೆಕಾಳು ಬೆಳೆ ಸಹ ನಾಶವಾಗಿದೆ. ಜೊತೆಗೆ ಬಿತ್ತನೆ ಮಾಡುವ ಅವಧಿ ಸಹ ಪೂರ್ಣಗೊಳ್ಳುತ್ತಾ ಬಂದಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಬಿತ್ತನೆ ವಿಸ್ತೀರ್ಣ ಅತೀ ಕಡಿಮೆ. 3,070 ಹೆಕ್ಟೇರ್ ಗುರಿಗೆ ಎದುರಾಗಿ ಮಳೆ ಕೊರತೆಯಿಂದ 751 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಆ ಬೆಳೆ ಸಹ ಉಷ್ಣಾಂಶಕ್ಕೆ ಒಳಗಾಗಿ ಮಂಕಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಬರಲು ಇನ್ನೂ ಅವಕಾಶವಿದೆ. ಈಗಿನ ಪರಿಸ್ಥಿತಿಯಲ್ಲಿ ರಾಗಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವುದು ಉತ್ತಮ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ.
•ಲೋಕೇಶ್,
ಕೃಷಿ ಇಲಾಖೆ ಉಪ ನಿರ್ದೇಶಕರು