Advertisement

ಸ್ತ್ರೀಯರಲ್ಲಿ ಉಳಿತಾಯ ಮನೋಭಾವ ಮುಖ್ಯ

04:01 PM Dec 16, 2019 | Naveen |

ಚಿಕ್ಕಮಗಳೂರು: ಮಹಿಳೆಯರು ಉಳಿತಾಯ ಮನೋಭಾವ ಅನುಸರಿಸುವ ಮೂಲಕ ವೃದ್ಧಾಪ್ಯದಲ್ಲಿ ಸ್ವತಂತ್ರವಾಗಿ ಬದುಕಬಹುದು ಎಂದು ಅಂಚೆ ಇಲಾಖೆ ವಿಶ್ರಾಂತ ಸಿಬ್ಬಂದಿ ಬಿ.ಪಿ. ಸರಸ್ವತಿ ಅಭಿಪ್ರಾಯಪಟ್ಟರು.

Advertisement

ಅಕ್ಕಮಹಾದೇವಿ ಮಹಿಳಾ ಸಂಘದ ಜ್ಯೋತಿನಗರ ಶರಣೆ ಆಯ್ದಕ್ಕಿ ಲಕ್ಕಮ್ಮ ತಂಡ ನಗರದ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹೊಸ್ತಿಲ ಹುಣ್ಣಿಮೆ ಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂಡೂ ಕಾಣದಂತೆ ಮಹಿಳೆಯರು ಉಳಿತಾಯ ಮಾಡುತ್ತಾರೆ. ಉಳಿತಾಯದ ಮೊತ್ತ ವೃದ್ಧಾಪ್ಯದಲ್ಲಿ ಕೈಗೆ ಬಂದರೆ ಮಕ್ಕಳು-
ಮೊಮ್ಮಕ್ಕಳು-ಸೊಸೆಯಂದಿರ ಹಂಗಿಲ್ಲದೆ ಬದುಕು ಸಾಗಿಸಬಹುದು. ಇಷ್ಟ ಬಂದಂತೆ ಖರ್ಚು ಮಾಡಬಹುದು. ಆದರೆ
ಅತಿಯಾದ ಬಡ್ಡಿ ಆಸೆಗಾಗಿ ಎಲ್ಲೆಲ್ಲೊ ಉಳಿತಾಯದ ಹಣವನ್ನು
ತೊಡಗಿಸಿ ಆ ನಂತರ ನಷ್ಟ ಅನುಭವಿಸುವ ಸಂದರ್ಭಗಳೇ ಇಂದು
ಅಧಿಕ. ಅಂಚೆ ಇಲಾಖೆ ದೀರ್ಘ‌ಕಾಲದಿಂದ ವಿಶ್ವಾರ್ಹತೆ ಹೊಂದಿದೆ.

ಉಳಿತಾಯಕ್ಕೆ ಅಂಚೆ ಇಲಾಖೆ ಅತ್ಯಂತ ಸೂಕ್ತ. ತೊಡಗಿಸಿದ ಹಣಕ್ಕೆ ಎಂದೂ ಮೋಸವಿಲ್ಲ ಎಂದರು. ಭಾರತೀಯ ಅಂಚೆ ಇಲಾಖೆ ಒಂದೂವರೆ ಶತಮಾನಗಳ ಇತಿಹಾಸ ಹೊಂದಿದೆ. ಬ್ರಿಟಿಷರ ಕಾಲದಲ್ಲಿ ಗೌರ್ನರ್‌ ಜನರಲ್‌ ಲಾರ್ಡ್‌ ಡಾಲ್‌ಹೌಸಿ 1854ರಲ್ಲಿ ಇಂಡಿಯನ್‌ ಪೋಸ್ಟಲ್‌ ಆಕ್ಟ್ ಜಾರಿಗೆ ತಂದರು. ಇಡೀ ದೇಶದಲ್ಲಿ ಏಕರೂಪದ ಶುಲ್ಕದೊಂದಿಗೆ ಅಂಚೆ ಇಲಾಖೆ ಕಾರ್ಯ ಆರಂಭಿಸಿತು. ಆರಂಭದಲ್ಲಿ ಸಾಮಾನ್ಯ ಅಂಚೆಪತ್ರಗಳ ಸ್ವೀಕೃತಿ, ರವಾನೆ ಮತ್ತು ಬಟವಾಡೆ ಸೇವೆ ಆರಂಭಿಸಿದ್ದು, ಆನಂತರ ಹಣಕಾಸಿನ ಸ್ವೀಕೃತಿ-ಬಟವಾಡೆ ಸೇರ್ಪಡೆಯಾಯಿತು. ವಿವಿಧ ಮಜಲುಗಳನ್ನು ಕಂಡು ಸೇವೆಗಳು ವಿಸ್ತೃತಗೊಂಡವೆಂದು ಅಂಚೆ ಇಲಾಖೆ ನಡೆದುಬಂದ ಹಾದಿ ತೆರೆದಿಟ್ಟರು. ಅಂಚೆಯೊಂದಿಗೆ ತಂತಿಸೇವೆಯು ನಿರಂತರವಾಗಿ ಮುಂದುವರಿದಿದ್ದು 1980ರಲ್ಲಿ ಅಂಚೆ ಇಲಾಖೆ ಮತ್ತು ಬಿಎಸ್‌ಎನ್‌ಎಲ್‌ ಪ್ರತ್ಯೇಕಗೊಂಡವು.

ಅಂಚೆ ಕಚೇರಿಗಳಲ್ಲಿ ಜೀವ ವಿಮೆ, ಅಂಚೆ ಚೀಟಿ ಸಂಗ್ರಹ, ಅಂತಾರಾಷ್ಟ್ರೀಯ ಹಣದ ವರ್ಗಾವಣೆ ಮತ್ತಿತರ ಹೊಸ ರೀತಿಯ ಸೇವೆಗಳು ಚಾಲ್ತಿಯಲ್ಲಿವೆ. ಕಂಪ್ಯೂಟರೀಕರಣದ ನಂತರ ಉಳಿತಾಯ ಪ್ರೇರೇಪಿಸುವ ಹತ್ತು ಹಲವು ಯೋಜನೆಗಳು ಜನಪ್ರಿಯವಾಗಿವೆ ಎಂದರು.

ಸಂಘದ ಅಧ್ಯಕ್ಷ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಪ್ರಾಮಾಣಿಕತೆ, ಬದ್ಧತೆ, ನಿಯಮಪಾಲನೆ ಭಯ ಭಕ್ತಿ ಇರುತ್ತಿತ್ತು. ಇಂದು ಅದೆಲ್ಲ ಕಡಿಮೆಯಾಗಿರುವುದು ಸಮಾಜದ ಅನೇಕ ಕೆಡುಕುಗಳಿಗೆ ಕಾರಣವಾಗಿದೆ. ಒಳ್ಳೆಯ ಬದಲಾವಣೆ ಸಣ್ಣ ಪ್ರಮಾಣದಲ್ಲಾದರೂ ನಮ್ಮಿಂದ ಆರಂಭವಾಗಬೇಕು. ತರಕಾರಿ, ದಿನಸಿ ಮತ್ತಿತರ ನಿತ್ಯ ಬಳಕೆಯ ವಸ್ತುಗಳನ್ನು ಕೈ ಚೀಲದಲ್ಲಿ ಮನೆಗೆ ತರುವ ಮೂಲಕ ಪ್ಲಾಸ್ಟಿಕ್‌ ದೂರವಿಟ್ಟರೆ ಪರಿಸರಕ್ಕೆ ದೊಡ್ಡ ಕಾಣಿಕೆ ನೀಡಿದಂತಾಗುವುದು ಎಂದರು.

Advertisement

ಸಂಘದ ಹಿರಿಯ ಸದಸ್ಯೆ ಬೀಕನಹಳ್ಳಿಯ ಪಾರ್ವತಮ್ಮ ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ತಂಡದ ಮುಖಂಡೆ ಲತಾ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ವಿಜಯ್‌ ಸ್ವಾಗತಿಸಿದರು. ಸ್ವಾತಿಮಧು ನಿರೂಪಿಸಿದರು. ಲತಾಶೇಖರ್‌ ಪರಿಚಯಿಸಿದರು. ಶೋಭಾ ವಂದಿಸಿದರು. ಗಿರಿಜಮ್ಮ ಮತ್ತು ಪುಷ್ಪಾ ಪ್ರಾರ್ಥಿಸಿ, ಶಿಲ್ಪಾ ರಘು ಹಾಗೂ ಸುಕನ್ಯಾ ತಂಡ ನಾಡಗೀತೆ ಹಾಡಿದರು.

ಉಪಾಧ್ಯಕ್ಷೆ ಕಾತ್ಯಾಯಿನಿ ನಿಚಂದ್ರಶೇಖರ್‌, ಖಜಾಂಚಿ ಯಮುನಾ ಸಿ.ಶೆಟ್ಟಿ, ಕಾರ್ಯದರ್ಶಿ ರೇಖಾ ಉಮಾಶಂಕರ್‌, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ಸಂಘಟನಾ ಕಾರ್ಯದರ್ಶಿ ನಾಗಮಣಿ ಕುಮಾರ್‌ ಇದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಲತಾಪ್ರಸನ್ನ ಅವರ ನೇತೃತ್ವದಲ್ಲಿ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next