Advertisement
ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಿದ್ದು ನೆಲೆ ಇಲ್ಲದವರಿಗೆ ನೆಲೆ ಕಲ್ಪಿಸಿಕೊಡುವ ಉದ್ದೇಶದಿಂದ ನಗರದ ಎಐಟಿ ಕಾಲೇಜು ಸಮೀಪದ ಡಾ|ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ನಿರಾಶ್ರಿತರ ಕೇಂದ್ರ ತೆರೆದಿದ್ದು ಇಲ್ಲಿ ಆಶ್ರಯ ಪಡೆದಿರುವವರದ್ದು ಒಂದೊಂದು ಕಥೆ. ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಅನೇಕರು ದೆಹಲಿ, ಮಧ್ಯಪ್ರದೇಶ, ತಮಿಳುನಾಡು ಹೀಗೆ ದೇಶದ ವಿವಿಧ ರಾಜ್ಯಗಳಿಗೆ ಸೆರಿದವರು. ಕೆಲವರು ಆರೋಗ್ಯವಂತರು. ಮತ್ತೆ ಕೆಲವರು ಬುದ್ಧಿಮಾಂದ್ಯರು, ಅಂಗವಿಕಲರು. ಅವರ ತಂದೆ-ತಾಯಿ ಸ್ಥಿತಿವಂತರಾಗಿದ್ದರೂ ಹೆತ್ತವರಿಗೆ ಹೊರೆ ಎನಿಸಿದಾಗ ರೈಲು ಹತ್ತಿಸಿ ಕಳುಹಿಸಿ ಬಿಡುತ್ತಾರೆ. ರೈಲು ಎಲ್ಲಿ ಬಂದು ನಿಲ್ಲುತ್ತೋ ಅದೇ ರೈಲು ಸ್ಟೇಷನ್ನೇ ಅವರ ಮನೆಯಾಗುತ್ತದೆ. ಹೀಗೆ ಬಂದವರೇ ಹೆಚ್ಚು ಎನ್ನುತ್ತಾರೆ ಮಲೆನಾಡು ಕ್ರೈಸ್ತ ಅಭಿವೃದ್ಧಿ ಸಂಘ ಹಾಗೂ ನಿರಾಶ್ರಿತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರೂಬೆನ್ ಮೊಸಸ್.
Related Articles
Advertisement
ಕೊರೊನಾ ವೈರಸ್ ತಡೆಯಲು ಸರ್ಕಾರ ಲಾಕ್‌ಡೌನ್ ವಿಧಿಸಿ ಎಲ್ಲವನ್ನು ಮುಚ್ಚಿಬಿಟ್ಟಿತು. ಆದರೆ, ಬೀದಿಯೇ ಮನೆ, ಭಿಕ್ಷೆಯೇ ಮೃಷ್ಠಾನ ಅನ್ನುವ ಜೀವಗಳಿಗೆ ದಾರಿ ಕಾಣದಂತಾಯಿತು. ಆಗ ಇವರ ನೆರವಿಗೆ ಬಂದಿದ್ದೇ ನಿರಾಶ್ರಿತ ಕೇಂದ್ರ. ಕಳೆದೊಂದು ತಿಂಗಳಿಂದ ಇವರ ಸೇವೆ ಮಾಡುತ್ತಿರುವ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ರೂಬಿ, ಸಹನ, ಫ್ರಾನ್ಸಿಸ್, ಸಿಲ್ವಸ್ಟರ್, ರೋನಿ, ಸಂಜು, ಜನೆಟ್, ಜೋಸಫ್, ಪ್ಯಾಟ್ರಿಕ್, ಜನ್ನಿಫರ್, ಯುವಸಹಾಯ ಹಸ್ತದ ಕಾರ್ತಿಕ್ ಜೆ.ಚೆಟ್ಟಿಯಾರ್, ತನೋಜ್, ಶಿವಕುಮಾರ್, ಸಂದೇಶ, ಭರತ್, ಪ್ರಜ್ವಲ್, ಗುರು ಇವರ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.
ನಿರಾಶ್ರಿತರ ಸೇವೆ ಮಾಡುತ್ತಿರುವ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಯುವ ಸಹಾಯ ಹಸ್ತ ತಂಡದ ಸದಸ್ಯರು ಇವರ ಜೀವನಕ್ಕೆ ನೆಲೆ ಕಲ್ಪಿಸಿಕೊಡಬೇಕು. ಚಿಕ್ಕಮಗಳೂರು ನಗರವನ್ನು ಭಿಕ್ಷುಕ ಮುಕ್ತ ನಗರ ಮಾಡಬೇಕು ಎಂದು ಪಣತೊಟ್ಟಿದ್ದು, ಇವರ ನಿಸ್ವಾರ್ಥ ಸೇವೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ 47 ಜನ ಆಶ್ರಯ ಪಡೆದುಕೊಂಡಿದ್ದಾರೆ. ಬುಧವಾರ ಸಹ ಹೊಸ ಅತಿಥಿ ಕೇಂದ್ರ ಸೇರಿದ್ದಾನೆ. ಈತನ ಹೆಸರು ಮುಖೇಶ್ ನಗರದ ರೈಲ್ವೆ ನಿಲ್ದಾಣದಲ್ಲಿ ಆಶ್ರಯ ಪಡೆದುಕೊಂಡಿದ್ದ. ಪಾರ್ಥೇನಿಯಂ ಸೊಪ್ಪನ್ನು ಪೇಂಟ್ ಡಬ್ಬದಲ್ಲಿ ಬೇಯಿಸಿ ತಿನ್ನುತ್ತಿದ್ದ ಈತನನ್ನು ಕರೆತಂದು ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
ಸಂದೀಪ ಜಿ.ಎನ್. ಶೇಡ್ಗಾರ್