ಚಿಕ್ಕಮಗಳೂರು: ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗಳಿಗೆ ಬಿಡುಗಡೆಯಾಗಿರುವ ಸಹಾಯಧನವನ್ನು ಬ್ಯಾಂಕ್ ಸಾಲದ ಉದ್ದೇಶಕ್ಕೆ ಕಡಿತ ಮಾಡಬಾರದು. ಕಡಿತ ಮಾಡಿದರೆ ಅಂತಹ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಶನಿವಾರ ಲಕ್ಯಾ, ಹಿರೇಗೌಜ, ಬಿಳೆಕಲ್ಲಳ್ಳಿ, ಲಕ್ಕಮ್ಮನಹಳ್ಳಿ, ಹುಲಿಕೆರೆ, ನಿಡಘಟ್ಟ, ನಾಗರಾಳು, ಜೋಡಿಹೋಚಿಹಳ್ಳಿ, ದೇವನೂರು, ಚಿಕ್ಕದೇವನೂರು ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಕೊರೋನಾ ಸೋಂಕು ನಿಯಂತ್ರಣ ಕ್ರಮದ ಕುರಿತು ಗ್ರಾಮಮಟ್ಟದ ಟಾಸ್ಕ್ಫೋರ್ಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಕೆಲ ಬ್ಯಾಂಕುಗಳಲ್ಲಿ ಹಣವನ್ನು ಸಾಲಕ್ಕೆ ಕಡಿತ ಮಾಡಿಕೊಳ್ಳುತ್ತಿರುವ ದೂರುಗಳು ಕೇಳಿ ಬರುತ್ತಿದ್ದು, ಸಾಲ ಕಡಿತಕ್ಕೆ ಅವಕಾಶವಿಲ್ಲ, ಅಂತಹ ಪ್ರಕರಣಗಳು ಕಂಡು ಬಂದರೆ ಬ್ಯಾಂಕ್ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಎನ್.ಆರ್.ಇ.ಜಿ ಯೋಜನೆಯಡಿ ಕೆಲಸ ನಿರ್ವಹಿಸುವ ಪ್ರತಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು. ಕೃಷಿ ಚಟುವಟಿಕೆಗಳು, ಆಹಾರೋತ್ಪನ್ನ ಮಾರಾಟ ಹಾಗೂ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು. ಕೊರೋನಾ ಸೋಂಕು ತಡೆಗೆ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಅ ಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಮಾಹಿತಿ ಸಂಗ್ರಹಿಸುತ್ತಿದ್ದು ಕೊರೊನಾ ಸೋಂಕಿನ ಕುರಿತು ಎಚ್ಚರಿಕೆ ವಹಿಸಬೇಕು ಎಂದರು. ಆಶಾ ಕಾರ್ಯಕರ್ತೆಯರು ಮಾಹಿತಿ ಸಂಗ್ರಹಿಸಿ ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಬಂದವರನ್ನು ಗುರುತಿಸಿ ಸೋಂಕಿನ ಲಕ್ಷಣ ಕಂಡು ಬಂದರೆ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಬೇಕು ಮತ್ತು ಸುರಕ್ಷಾ ಸಾಧನಗಳನ್ನು ಬಳಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ಹಳ್ಳಿಗಳಲ್ಲೂ ಪಡಿತರ ವಿತರಿಸಲಾಗುತ್ತಿದ್ದು, ವಿತರಣೆ ವೇಳೆ ಒ.ಟಿ.ಪಿ ಕಡ್ಡಾಯವಲ್ಲ ಎಂದು ಸರ್ಕಾರ ನಿರ್ದೇಶನ ನೀಡಿದೆ. ಅಲ್ಲದೇ ಪಡಿತರ ವಿತರಣೆ ಸಂದರ್ಭ ತೂಕದಲ್ಲಿ ವ್ಯತ್ಯಾಸದ ದೂರುಗಳು ಕೇಳಿ ಬರುತ್ತಿದ್ದು, ತೂಕದಲ್ಲಿ ಲೋಪದೋಷ ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ಅಲೆಮಾರಿಗಳು, ವಲಸೆ ಕಾರ್ಮಿಕರು, ಬಿ.ಪಿ.ಎಲ್. ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ಸೇರಿದಂತೆ ಯಾವುದೇ ಭಾಗದವರು ಇದ್ದಲ್ಲಿ ಅಂತವರಿಗೆ ಎಸ್.ಡಿ.ಆರ್.ಎಫ್ ಮೂಲಕ ಪಡಿತರ ವಿತರಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಬೆಳವಾಡಿ, ತಾಲೂಕು ಪಂಚಾಯತ್ ಸದಸ್ಯ ಮಹೇಶ್, ತಹಶೀಲ್ದಾರ್ ನಂದಕುಮಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿ ಕಾರಿ ಎಚ್.ಡಿ.ರೇವಣ್ಣ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜ್ ಕಳಾಸಪುರ ವೈದ್ಯಾ ಧಿಕಾರಿ ಡಾ| ಕಾರ್ತಿಕ್, ಮೆಸ್ಕಾಂನ ಕಾರ್ಯಪಾಲನಾ ಇಂಜಿನಿಯರ್ ಕಾರ್ತಿಕ್ ಉಪಸ್ಥಿತರಿದ್ದರು.