ಚಿಕ್ಕಮಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ತೊಂದರೆಯಾಬಾರದು ಎಂಬ ದೃಷ್ಟಿಯಿಂದ ರೈತರ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ, ರೈತರು ಕೃಷಿ ಚಟುವಟಿಕೆ ನಡೆಸಬಹುದು. ಆದರೆ, ಮುಂಜಾಗ್ರತೆ ವಹಿಸಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಶುಕ್ರವಾರ ನಗರದ ಜಿಪಂ ಸಂಭಾಂಗಣದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಪೂರೈಕೆ, ಸಾಗಣೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರೈತರಿಗೆ ಅನುಕೂಲದ ದೃಷ್ಟಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆಯುವಂತೆ ಮತ್ತು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸದಂತೆ ಸರ್ಕಾರ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಔಷಧ ಅಂಗಡಿಗಳನ್ನು ತೆರೆಯಲಾಗಿದೆ. ಈಗಾಗಲೇ ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ರೈತರು ಮತ್ತು ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಮಾತನಾಡಿ, ಸರ್ಕಾರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಬಾರದು. ರೈತರು ಬಿತ್ತನೆ ಕಾರ್ಯ ಪ್ರಾರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು. ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಚಟುವಟಿಕೆಗೆ ಅಡ್ಡಿಪಡಿಸಿದರೆ ಮುಂದೆ ಸಂಭವಿಸಬಹುದಾದ ಸಮಸ್ಯೆಯ ಬಗ್ಗೆ ಸರ್ಕಾರ ಮನಗಂಡಿದೆ. ಆದ್ದರಿಂದ ರಾಜ್ಯ ಸರ್ಕಾರ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗೆ ಸಂಪೂರ್ಣ ವಿನಾಯಿತಿ ನೀಡಿದೆ. ರೈತರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೀಡುವ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು ಎಂದರು.
ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮಲೆನಾಡು ಜನರ ಜೀವನ ಶೈಲಿಯೇ ಬೇರೆ. ಅವರು ದಿನ ಕೂಲಿಗೆ ಹೋದರಷ್ಟೇ ಜೀವನ ನಡೆಸಲು ಸಾಧ್ಯ. ಪೊಲೀಸರ ಭೀತಿಯಿಂದ ಕಾರ್ಮಿಕರು ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ಅಡಕೆ, ಕಾಫಿ,ಕಾಳುಮೆಣಸು ಬೆಳೆದ ರೈತರು ದಾಸ್ತಾನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ದಿನ ನಿದ್ದೆ ಮಾಡಲು ಜನರು ಬಿಡುತ್ತಿಲ್ಲ. ನಾವು ಏನೆಂದು ಉತ್ತರಿಸಬೇಕು ಎಂದು ಪ್ರಶ್ನಿಸಿದ ಅವರು, ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪೊಲೀಸರು ಮತ್ತು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂ ಸಬೇಕು. ಹಾಗೆಂದು ಲಾಕ್‌ಡೌನ್ ಸಡಿಲ ಮಾಡಿದರೂ ಕಷ್ಟ. ಸೋಂಕು ನಿಯಂತ್ರಣ ಅಸಾಧ್ಯ. ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕು ಎಂದು ತಿಳಿಸಿದರು. ಪಡಿತರ ಅಂಗಡಿಗಳಲ್ಲಿ ಬಾರೀ ಅವ್ಯಾವಹಾರ ನಡೆಯುತ್ತಿದೆ. ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಅವ್ಯವಹಾರ ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು.
ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಜನರ ಒಳಿತಿಗಾಗಿ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ನೀಡಿದೆ. ಆದರೆ, ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ ಎಂದರು.ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಪೊಲೀಸರ ಭಯದಿಂದ ರೈತರು ಹೊಲಗದ್ದೆಗಳಿಗೆ ಹೋಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದರು. ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಸೋಂಕು ಹರಡುವುದನ್ನು ತಡೆಗಟ್ಟಲು ನಿರ್ಬಂಧ ಹೇರಿದೆ. ಸರ್ಕಾರ ಬೇಕೆಂದು ಲಾಕ್‌ಡೌನ್ ವಿಧಿಸಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರು.
ಹೂ ಬೆಳೆದ ರೈತರ ಮಾಹಿತಿ ಸಂಗ್ರಹಿಸುವಂತೆ ಸಿಎಂ ಅ ಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರಿಗೆ ಸರ್ಕಾರ ಮುಂದಿನ ದಿನಗಳಲ್ಲಿ ಪರಿಹಾರ ಒದಗಿಸಲಿದೆ ಎಂದರು.ಸಭೆಯಲ್ಲಿ ಸಚಿವ ಸಿ.ಟಿ.ರವಿ, ಉಪಸಭಾಪತಿ ಎಸ್‌ಎಲ್ ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಡಿಸಿ ಡಾ| ಬಗಾದಿ ಗೌತಮ್ ಇತರರಿದ್ದರು.