ಚಿಕ್ಕಮಗಳೂರು: ಕಳಸ ಇನಾಂ ಭೂಮಿ ನಿರಾಶ್ರಿತರಿಗೆ ಬದಲಿ ಭೂಮಿ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವ ವಿಷಯದ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಡನೆ ಸಭೆ ನಡೆಸಿದ ಸಚಿವರು, ಕಳಸದ 635 ಕುಟುಂಬಗಳು 2,501 ಎಕರೆ ಇನಾಂ ಭೂಮಿ ಹೊಂದಿದ್ದು, ಈ ಇನಾಂ ಭೂಮಿ ಅರಣ್ಯ ಇಲಾಖೆಗೆ ಸೇರಿದ ಭೂಮಿ ಎಂದು ನ್ಯಾಯಾಲಯ ಪರಿಗಣಿಸಿದ ಹಿನ್ನೆಲೆಯಲ್ಲಿ ತೆರವುಗೊಳಿಸಬೇಕಾಗಿತ್ತು ಎಂದರು. ಅನೇಕ ತಲೆಮಾರುಗಳಿಂದ ವಾಸ ಮಾಡುತ್ತಿರುವ ಈ ಕುಟುಂಬಗಳನ್ನು ತೆರವುಗೊಳಿಸದೆ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ ನಿರಾಶ್ರಿತ ಕುಟುಂಬಗಳನ್ನು ಅಲ್ಲಿಯೇ ಉಳಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗಿತ್ತು ಎಂದು ಹೇಳಿದರು.
635 ಕುಟುಂಬಗಳಲ್ಲಿ 367 ಕುಟುಂಬಗಳು 3 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿದ್ದರೆ, ಉಳಿದ ಕುಟುಂಬಗಳು 3 ಎಕರೆಯೊಳಗೆ ಭೂಮಿ ಹೊಂದಿವೆ. ಹಾಗಾಗಿ, ಪರ್ಯಾಯ ಭೂಮಿಯನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಅದರಂತೆ ಜಿಲ್ಲಾಡಳಿತ ಪರ್ಯಾಯ ಭೂಮಿ ಗುರುತಿಸಿದೆ ಎಂದರು.
ಸಭೆಯಲ್ಲಿ ತಕ್ಷಣ ಪರ್ಯಾಯ ಭೂಮಿ ನೀಡುವ ಪ್ರಮಾಣ ಪತ್ರ ಹಾಗೂ ವಿವರಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಅನುಮೋದನೆಗೆ ಹಾಗೂ ಸಚಿವ ಸಂಪುಟದ ಒಪ್ಪಿಗೆಗೆ ಇಡಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು. ಆಗಸ್ಟ್, ಸೆಪ್ಪೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಮೂಡಿಗೆರೆ ತಾಲೂಕಿನ ಮಧುಗುಂಡಿ ಸೇರಿದಂತೆ 282 ಎಕರೆ ಭೂಮಿ ನಾಶವಾಗಿದೆ. ಸಂತ್ರಸ್ತರಿಗೆ ಭೂಮಿ ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಹಾಗೂ ಸಚಿವ ಸಂಪುಟದ ಒಪ್ಪಿಗೆಗೆ ಸಲ್ಲಿಸಲು ಸಭೆ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.