Advertisement

ಪ್ರಮೋದ್‌ ಹರಕೆಯ ಕುರಿ

05:17 PM Apr 21, 2019 | Naveen |

ಚಿಕ್ಕಮಗಳೂರು: ಕಾಂಗ್ರೆಸ್‌ ಪಕ್ಷದಿಂದ ಪ್ರಮೋದ್‌
ಮಧ್ವರಾಜ್‌ ಅವರನ್ನು ಕರೆತಂದು ಚುನಾವಣೆಯಲ್ಲಿ ಕಣಕ್ಕಿಳಿಸಿ ಅವರನ್ನು ಹರಕೆಯ ಕುರಿಯಾಗಿಸಲಿದೆ. ಇದು ಮೇ 23 ರಂದು ಸಾಬೀತಾಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್‌.ಲೋಕೇಶ್‌ ವ್ಯಂಗ್ಯವಾಡಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ ಉಪಾಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮತ್ತು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜ್‌ ಮೈತ್ರಿ ಅಭ್ಯರ್ಥಿಯ ಪರ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಜನತೆಗೆ ತಿಳಿದಿದೆ ಎಂದು ಟಾಂಗ್‌ ನೀಡಿದರು.

ರಾಜ್ಯದಲ್ಲಿ ಸರ್ಕಾರ ಬಿಳುತ್ತೆ ಎಂದು ಬಿಜೆಪಿಯವರು
ಹಗಲುಗನಸು ಕಾಣುತ್ತಿದ್ದಾರೆ ಎಂಬ ಭೋಜೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಭೋಜೇಗೌಡರು ಹತಾಶೆಯಿಂದ ಈ ಮಾತು ಹೇಳಿದ್ದಾರೆ. ಸುಳ್ಳು ಹೇಳಿದ ಕೂಡಲೇ ಜನರು ನಂಬುವುದಿಲ್ಲ. ಇವರು ತಮ್ಮ ಅಭ್ಯರ್ಥಿಯ ಪರ ಎಷ್ಟು ಕೆಲಸ ಮಾಡಿದ್ದಾರೆ, ಮಂಡ್ಯದಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಜನತೆ ನೋಡಿದ್ದಾರೆ. ಭೋಜೇಗೌಡರ ಮಾತು ಕೇಳಿದರೆ ‘ಕುಣಿಯಲಾರದವರು ನೆಲ ಡೊಂಕು ಎಂದರು’ ಎಂಬ ಗಾದೆ ಮಾತು ನೆನಪಾಗುತ್ತಿದೆ ಎಂದು ಲೇವಡಿ ಮಾಡಿದರು.

ಜೆಡಿಎಸ್‌ಗೆ ಬೆಂಬಲ ನೀಡಿದ್ದು ನೀವೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿ ಎಂದಿದ್ದು ನೀವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಇಷ್ಟವಿಲ್ಲ ಎಂದರೆ ಕೆಳಗಿಳಿಸಿ ಎಂದು ಕಾಂಗ್ರೆಸ್‌ ಮುಖಂಡರಿಗೆ ಸಲಹೆ ನೀಡಿದ ಲೋಕೇಶ್‌, ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರೆ ಜನರು ನಂಬೋದಿಲ್ಲ. ಬಿಜೆಪಿ ವಿರೋಧ ಪಕ್ಷವಾಗಿ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದೆ ಎಂದರು.

ಕುಮಾರಸ್ವಾಮಿ ಅವರು ಭಾವನಾಜೀವಿ ಎಂದು ಹೇಳಿದ್ದೀರಿ. ಚುನಾವಣೆ ಸಂದರ್ಭದಲ್ಲಿ, ವೇದಿಕೆ ಮೇಲೆ ಮಾತ್ರ ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುತ್ತದೆಯೇ ಎಂದು ಪ್ರಶ್ನಿಸಿದ ಅವರು, ಮೈತ್ರಿ ಸರ್ಕಾರದಲ್ಲಿ ಜನರ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಾರೆ. ಆರೋಗ್ಯ ಸರಿಯಿಲ್ಲ ಎಂದು ಹರಿಕಥೆ ಶುರು ಮಾಡಿದ್ದಾರೆ. ಜನರ ಕೆಲಸ ಮಾಡಲು ಆಗುತ್ತಿಲ್ಲ ಎಂದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದರು. ಬಿ.ಎಸ್‌.ಯಡಿಯೂರಪ್ಪ ಅವರದ್ದು ಕುಟುಂಬ
ರಾಜಕಾರಣ ಎಂಬ ಭೋಜೇಗೌಡರ ಮಾತಿಗೆ ತಿರುಗೇಟು ನೀಡಿದ ಲೋಕೇಶ್‌, ಬಿ.ಎಸ್‌.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ
ದುಡಿದಿದ್ದಾರೆ. ಕೆಳ ಹಂತದ ಚುನಾವಣೆಯಲ್ಲಿ ಗೆದ್ದು ಬಂದು ಜನರ ಕೆಲಸ ಮಾಡಿ ಈಗ ಸಂಸದರಾಗಿದ್ದಾರೆ. ದೇವೇಗೌಡರ ಕುಟುಂಬದ ಪ್ರಜ್ವಲ್‌ ರೇವಣ್ಣ ಹಾಗೂ ನಿಖೀಲ್‌ ಏನು ಕೆಲಸ
ಮಾಡಿಲ್ಲ, ಯಾವ ಮಾನದಂಡದಿಂದ ಟಿಕೆಟ್‌ ನೀಡಿದ್ದಾರೆ ಎಂದು ಪ್ರಶ್ನಿಸಿದರು.

Advertisement

ಪದೇ ಪದೇ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆಂದು ಇದುವರೆಗೂ
ರಾಜ್ಯ ಹಾಗೂ ಜಿಲ್ಲೆಯ ಒಬ್ಬ ರೈತನ ಸಾಲಮನ್ನಾ ಆಗಿಲ್ಲ. ನಿಮ್ಮ ಸುಳ್ಳು ಹೇಳಿಕೆಗೆ ಜನರು ಮಾರು ಹೋಗುವುದಿಲ್ಲ. ಕೊನೆಗೆ ಒಮ್ಮತವಿಲ್ಲದೆ ಸರ್ಕಾರ ಬಿಧ್ದೋಯ್ತು ಸಾಲಮನ್ನಾ ಮಾಡಲು ಆಗಲಿಲ್ಲ ಎಂಬ ಮಾತು ಇನ್ನೂ ಮೂರು ತಿಂಗಳಲ್ಲಿ ಬರುತ್ತೆ ಎಂದು ಮುಂಗಡವಾಗಿ ಹೇಳುತ್ತೇನೆ ಎನ್ನುವ ಮೂಲಕ ರಾಜ್ಯ ಸರ್ಕಾರಕ್ಕೆ ಆಯುಷ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಮೋದಿ ಅವರ ಬಟ್ಟೆಯ ಬಗ್ಗೆ ಮಾತನಾಡಿದ್ದೀರಾ? ಒಬ್ಬ ಸಾಮಾನ್ಯ ರೈತನ ಮಗ ಎಂದುಕೊಳ್ಳುವ ಭೋಜೇಗೌಡರು ಅವರು ಹಾಕುವ ದುಬಾರಿ ಬಟ್ಟೆ, ವಾಚು, ಐಷಾರಾಮಿ ಕಾರು ಎಲ್ಲಿಂದ ಬಂತು ಎಂದು ಅವರೆ ಹೇಳಬೇಕು. ನರೇಂದ್ರ ಮೋದಿ ಅವರ ತಾಯಿ ಮತ್ತು ಪತ್ನಿ ದೇಶದ ಸೇವೆ ಮಾಡಿ ಎಂದು ಕಳಿಸಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಿದ
ಸಮಾರಂಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಏಕವಚನದಲ್ಲಿ ಮಾತನಾಡುತ್ತಿದ್ದು ಅವರ ಯೋಗ್ಯತೆ ಏನೆಂದು ತೋರಿಸುತ್ತದೆ. ಸಿದ್ಧರಾಮಯ್ಯ ಅವರು ಇದೇ ರೀತಿ ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಟ್ಟರೆ ಮುಂದೆ ಪಶ್ಚಾತ್ತಾಪ
ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿ.ಪಂ. ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ,
ಈಶ್ವರಪ್ಪ ಆರ್‌ಎಸ್‌ಎಸ್‌ ಗುಲಾಮ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಸಿದ್ಧರಾಮಯ್ಯ ಅವರು ಆರ್‌ಎಸ್‌ಎಸ್‌ ಇತಿಹಾಸ ಮೊದಲು ತಿಳಿದುಕೊಂಡು ಮಾತನಾಡಲಿ. ಬ್ರಿಟೀಷರು ಬಿಟ್ಟು ಹೋಗಿರುವ ಗುಲಾಮಗಿರಿ ಕಾಂಗ್ರೆಸ್‌ಗೆ ಸಲ್ಲಬೇಕು. ಸಿದ್ಧರಾಮಯ್ಯ ಅವರು ಆರ್‌ಎಸ್‌ಎಸ್‌ ಹಾಗೂ ಈಶ್ವರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ರಾಜಪ್ಪ, ಶ್ರೀಕಾಂತ್‌ ಪೈ, ನಾರಾಯಣ ಗೌಡ ಇದ್ದರು.

ಜೆಡಿಎಸ್‌ ಕಡಿಮೆ ಸ್ಥಾನ ಗಳಿಸಿದರೂ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಿಗಳು
ಮುಖ್ಯಮಂತ್ರಿ ಮಾತು ಕೇಳುತ್ತಿಲ್ಲ, ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಒಂದು
ವರ್ಷ ಕಳೆದಿಲ್ಲ, ಆಗಲೇ ಸಿದ್ಧರಾಮಯ್ಯ ಮುಂದಿನ
ಮುಖ್ಯಮಂತ್ರಿ ನಾನೇ ಎನ್ನುತ್ತಾರೆ, ಮತ್ತೂಂದು ಕಡೆ ಡಿ.ಕೆ.ಶಿವಕುಮಾರ್‌ ನಾನೇನು ಸನ್ಯಾಸಿಯಲ್ಲ ಮುಂದಿನ ಸಿಎಂ ನಾನೇ ಎನ್ನುತ್ತಾರೆ. ಇದು ಎಸ್‌
ಎಲ್‌ ಭೋಜೇಗೌಡರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಲೋಕೇಶ್‌,ಮೈತ್ರಿ ಪಕ್ಷದವರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಸುಮ್ಮನೆ ಬಿಜೆಪಿ ದೂರುತ್ತಾರೆ
.ಸಿ.ಎಚ್‌. ಲೋಕೇಶ್‌,
ಬಿಜೆಪಿ ಜಿಲ್ಲಾ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next