Advertisement

ರೈತರನ್ನು ಒಕ್ಕಲೆಬ್ಬಿಸಿದ್ರೆ ಉಗ್ರ ಹೋರಾಟ: ಸಚಿನ್‌ ಮೀಗಾ

05:21 PM May 05, 2019 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಧಾರ ರಹಿತವಾಗಿ ರೈತರ ಜಮೀನುಗಳಲ್ಲಿ ಟ್ರಂಚ್ ಹೊಡೆಯುತ್ತಿದ್ದು, ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಕಿಸಾನ್‌ ಸೆಲ್ ಅಧ್ಯಕ್ಷ ಸಚಿನ್‌ ಮೀಗಾ ಎಚ್ಚರಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ತೆೆರವು ಪ್ರಕ್ರಿಯೆ ಹಾಗೂ ಅರಣ್ಯ ಅಧಿಕಾರಿಗಳು ಆಧಾರ ರಹಿತವಾಗಿ ರೈತರ ಜಮೀನಿನಲ್ಲಿ ಟ್ರಂಚ್ ನಿರ್ಮಿಸುತ್ತಿರುವುದು ಬಹಳ ಗಂಭೀರವಾದ ಸಮಸ್ಯೆ. ಯಾವುದೇ ಸರ್ಕಾರ ಅಥವಾ ನ್ಯಾಯಾಲಯಗಳ ಆದೇಶವಿರಬಹುದು. ಆದರೆ, ರೈತರಿಗೆ ತೊಂದರೆ ನೀಡಿ, ರೈತರ ಜಮೀನನ್ನು ಅತಿಕ್ರಮಿಸಿದರೆ ಅಂತಹವರ ವಿರುದ್ಧ ಪಕ್ಷಾತೀತವಾಗಿ ರೈತರು ಹೋರಾಟಕ್ಕೆ ಇಳಿದರೆ ಹೋರಾಟದ ನೇತೃತ್ವ ವಹಿಸಲು ತಾವು ಸಿದ್ಧವಿರುವುದಾಗಿ ತಿಳಿಸಿದರು.

ಮಲೆನಾಡು ಭಾಗದ ರೈತರು ಬಯಲುನಾಡು ರೈತರ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಬಯಲುನಾಡಿನ ರೈತರ ಹೋರಾಟದ ಮಾದರಿಯಲ್ಲಿಯೇ ಮಲೆನಾಡಿನ ರೈತರೂ ಹೋರಾಟಕ್ಕಿಳಿದರೆ ಅಂತಹ ಹೋರಾಟದ ನೇತೃತ್ವ ವಹಿಸಲು ಸಿದ್ಧನಿದ್ದು, ಅಂತಹ ಸಂದರ್ಭಗಳಲ್ಲಿ ನನ್ನ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಿದರೂ ಅಥವಾ ಜೈಲಿಗೆ ಹಾಕಿದರೂ ಅದನ್ನು ಸಮರ್ಥವಾಗಿ ಎದುರಿಸಿ, ರೈತರಿಗೆ ನ್ಯಾಯ ಒದಗಿಸಲು ನಾನು ಶಕ್ತನಾಗಿದ್ದೇನೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಹಲವಾರು ರೈತ ಹೋರಾಟಗಾರರಿಗೆ ರೈತರಿಂದ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗದೆ ಹೋರಾಟದ ಕಿಚ್ಚು ತಣ್ಣಗಾಗಿದೆ. ರೈತರು ಇದನ್ನು ಮನವರಿಕೆ ಮಾಡಿಕೊಳ್ಳಬೇಕು. ಯಾವುದೇ ಸರ್ಕಾರವಿರಬಹುದು. ಅದು ರೈತರ ವಿರುದ್ಧವಾದ ನಿಲುವುಗಳನ್ನು ಕೈಗೊಂಡರೆ ರೈತರು ಅದರ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಬದ್ಧರಾಗಿರಬೇಕು. ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿದಲ್ಲಿದ್ದಾಗ ಹಳದಿ ಎಲೆ ರೋಗಬಾಧಿತ ಅಡಿಕೆ ಬೆಳೆಗಾರರ ಸಾಲಮನ್ನಾದ ಗೋರಕ್‌ಸಿಂಗ್‌ ವರದಿಯನ್ನು ಅನುಷ್ಠಾನಗೊಳಿಸಲು ಈ ಹಿಂದೆ ತಾವು ಇತರರೊಂದಿಗೆ ಸೇರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇನ್ನೂ ವಾದ-ವಿವಾದಗಳ ಹಂತದಲ್ಲಿದೆ. ಹಾಗೂ ರೈತರ ಭೂಮಿ ಒತ್ತುವರಿಯನ್ನು ತೆರವುಗೊಳಿಸುವಂತೆ ನ್ಯಾಯಾಲಯವು ಎಸ್‌.ಆರ್‌.ಹಿರೇಮs್ ಹೂಡಿದ್ದ ದಾವೆಯಲ್ಲಿ ಆದೇಶಿಸಿತ್ತು. ಅಂತಹ ಸಂದರ್ಭದಲ್ಲಿ ಎಸ್‌.ಆರ್‌.ಹಿರೇವ್ಮs್ ಅವರ ವಿರುದ್ಧವೇ ಕೋರ್ಟಿನಲ್ಲಿ ದಾವೆ ಹೂಡಿ ಸದರಿ ಆದೇಶವನ್ನು ರದ್ದು ಮಾಡಿಸಿ, 5 ಎಕರೆವರೆಗಿನ ಒತ್ತುವರಿ ತೆರವು ಮಾಡದಂತೆ ಹೊಸ ಆದೇಶವನ್ನು ಪಡೆಯಲಾಗಿತ್ತು ಎಂದು ಹೇಳಿದರು.

ಮಲೆನಾಡಿನ ರೈತರಿಗೆ ಇಂತಹ ಸಂಕಷ್ಟದ ಪರಿಸ್ಥಿತಿಗೆ ರೈತರಲ್ಲಿರುವ ಒಗ್ಗಟ್ಟಿನ ಹೋರಾಟದ ಕೊರತೆಯೇ ಕಾರಣವಾಗಿದೆ. ಚುನಾಯಿತ ಪ್ರತಿನಿಧಿಗಳು ಆದ್ಯತೆ ಮೇರೆಗೆ ಅರಣ್ಯ ಕಾಯ್ದೆಯನ್ನು ಅಧ್ಯಯನ ಮಾಡಿ ನಂತರ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಈ ಹಿಂದೆ 2002ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿಯಲ್ಲಿರುವ ಸುಮಾರು 1,38,000 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದ್ದು, ಇಂದಿನ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಕೂಡಲೇ ಜಿಲ್ಲೆಯ ಪ್ರಭಾವಿ ಶಾಸಕರಾದ ಟಿ.ಡಿ.ರಾಜೇಗೌಡ. ಸಿ.ಟಿ.ರವಿ ಹಾಗೂ ಎಂ.ಪಿ.ಕುಮಾರಸ್ವಾಮಿ ಅವರು ಸರ್ವೇ ಕಾರ್ಯವನ್ನು ತಡೆ ಹಿಡಿದು ರೈತರು ಸಾಗುವಳಿ ಮಾಡಿದ ಜಮೀನಿನೊಳಗೆ ಅರಣ್ಯ ಇಲಾಖಾಧಿಕಾರಿಗಳು ಟ್ರಂಚ್ ನಿರ್ಮಿಸದಂತೆ ನೋಡಿಕೊಳ್ಳಬೇಕು. 2002ರಲ್ಲಿ ದುರುದ್ದೇಶದಿಂದ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವುದನ್ನು ರದ್ದುಪಡಿಸಲು ಈ ಶಾಸಕರು ಕಾರ್ಯ ಪ್ರವೃತ್ತರಾಗಬೇಕು. ಇದನ್ನು ನಿರ್ಲಕ್ಷಿಸಿದರೆ ಈ ಶಾಸಕರ ಕಚೇರಿ, ನಿವಾಸಗಳ ಎದುರು ರೈತರ ಜತೆಗೂಡಿ ಅನಿರ್ದಿಷ್ಠಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

Advertisement

ಯಾವ ಅರಣ್ಯಾಧಿಕಾರಿಗಳೂ ದೇವಲೋಕದಿಂದ ಬಂದವರಲ್ಲ. ಅವರುಗಳೂ ಕಾನೂನು-ನಿಯಮ ಪಾಲಿಸಬೇಕು. ಅರಣ್ಯ ಅಧಿಕಾರಿಗಳಿಗೆ ಗಿಡಗಳನ್ನು ನೆಡಲು, ಪೋಷಿಸಲು ರಕ್ಷಿಸಲು ಅವಕಾಶವಿದೆಯೇ ಹೊರತು ರೈತರು ಬೆಳೆದ ಗಿಡ-ಮರಗಳನ್ನು ಕಡಿಯಲು ಅವರಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನನ್ನು ಮೀರಿ ವರ್ತಿಸುವ ಅರಣ್ಯಾಧಿಕಾರಿಗಳನ್ನು ಗಡೀಪಾರು ಮಾಡಲು ಮಲೆನಾಡು ಭಾಗದ ರೈತರು ಮುಂದಾಗಬೇಕು ಎಂದು ತಿಳಿಸಿದರು.

ಸಮಿತಿ ರದ್ದು: ಕೆಪಿಸಿಸಿ ಕಿಸಾನ್‌ಸೆಲ್ನ ಚಿಕ್ಕಮಗಳೂರು ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದ ಸಮಿತಿಗಳನ್ನು ವಿಸರ್ಜಿಸಲಾಗಿದೆ. ಶೀಘ್ರದಲ್ಲಿಯೇ ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೃಷ್ಣೇಗೌಡ, ಈಶ್ವರ್‌, ಆನಂದ್‌, ಪ್ರಕಾಶ್‌ ಇದ್ದರು.

ಮಲೆನಾಡು ಭಾಗದ ರೈತರು ಬಯಲುನಾಡು ರೈತರ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಬಯಲುನಾಡಿನ ರೈತರ ಹೋರಾಟದ ಮಾದರಿಯಲ್ಲಿಯೇ ಮಲೆನಾಡಿನ ರೈತರೂ ಹೋರಾಟಕ್ಕಿಳಿದರೆ ಅಂತಹ ಹೋರಾಟದ ನೇತೃತ್ವ ವಹಿಸಲು ಸಿದ್ಧನಿದ್ದು, ಅಂತಹ ಸಂದರ್ಭಗಳಲ್ಲಿ ನನ್ನ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಿದರೂ ಅಥವಾ ಜೈಲಿಗೆ ಹಾಕಿದರೂ ಅದನ್ನು ಸಮರ್ಥವಾಗಿ ಎದುರಿಸಿ, ರೈತರಿಗೆ ನ್ಯಾಯ ಒದಗಿಸಲು ನಾನು ಶಕ್ತನಾಗಿದ್ದೇನೆ.
•ಸಚಿನ್‌ ಮೀಗಾ, ಕೆಪಿಸಿಸಿ ಕಿಸಾನ್‌ ಸೆಲ್ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next