Advertisement
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಚಿಕ್ಕಮಗಳೂರು ತಾಪಂ ಅಧ್ಯಕ್ಷ ನೆಟ್ಟೇಕೆರೆ ಜಯಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶರಶ್ಚಂದ್ರ ಅವರು, 2018-19ನೇ ಸಾಲಿಗೆ ಸರ್ಕಾರದಿಂದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಬಿಡುಗಡೆ ಮಾಡಿದ್ದ ಲಕ್ಷಾಂತರ ರೂ. ಸಾದಿಲ್ವಾರು ವೆಚ್ಚದ ಅನುದಾನವನ್ನು ತಾಪಂ ಅನುಮೋದನೆ ಪಡೆದುಕೊಳ್ಳದೇ ನಿಯಮಬಾಹಿರವಾಗಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ಜಿಪಂ ಅಧ್ಯಕ್ಷೆ ಸುಜಾತಾ ಮಾತನಾಡಿ, ಬಿಇಒ. ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳುವವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು. ಕಚೇರಿಯಲ್ಲಿ ಮೋಜು, ಮಸ್ತಿ ಮಾಡಿರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುದುರೆಮುಖದಲ್ಲಿ ತಾಲೂಕು ಕಚೇರಿ ಬೇಡ: ಜಿಪಂ ಸದಸ್ಯ ಪ್ರಭಾಕರ್ ಮಾತನಾಡಿ, ಕಳಸವನ್ನು ತಾಲೂಕು ಕೇಂದ್ರ ಮಾಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿತ್ತು. ಕಳಸವನ್ನು ತಾಲೂಕು ಕೇಂದ್ರವಾಗಿಸಿ ಆದೇಶಿಸಿರುವುದಕ್ಕೆ ರಾಜ್ಯಸರ್ಕಾರವನ್ನು ಅಭಿನಂದಿಸಲಾಗುವುದು. ಆದರೆ, ಮೊನ್ನೆ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುದುರೆಮುಖದಲ್ಲಿ ತಾಲೂಕುಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕುದುರೆಮುಖದಲ್ಲಿ ತಾಲೂಕು ಕಚೇರಿ ತೆರೆದರೆ ಹಲವು ಗ್ರಾಮಗಳಿಗೆ ಬಹಳ ದೂರವಾಗುತ್ತದೆ. ಆದ ಕಾರಣ ಕಳಸದಲ್ಲಿಯೇ ಕಚೇರಿ ತೆರೆಯಬೇಕೆಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಬಣಕಲ್ ಶಾಮಣ್ಣ, ಯಾವುದೇ ಕಾರಣಕ್ಕೂ ಕುದುರೆಮುಖದಲ್ಲಿ ಕಚೇರಿ ತೆರೆಯಬಾರದು. ಆ ರೀತಿ ಮಾಡಿದರೆ ಕಳಸವನ್ನು ತಾಲೂಕು ಕೇಂದ್ರ ಮಾಡಿದ ಉದ್ದೇಶವೇ ಈಡೇರುವುದಿಲ್ಲ ಎಂದರು.
ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಕುದುರೆಮುಖದಲ್ಲಿ ತಾಲೂಕು ಕಚೇರಿ ತೆರೆಯದಂತೆ ನಿರ್ಣಯ ಮಾಡಲಾಗಿದ್ದು, ನಿರ್ಣಯದ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
10 ನಿಮಿಷ ಮುಂದಕ್ಕೆ: ಸಭೆ ಆರಂಭವಾದ ನಂತರ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಲು ಹಲವು ಬಾರಿ ಯತ್ನಿಸಿದರೂ ಅವಕಾಶ ದೊರೆತಿರಲಿಲ್ಲ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಭೆಯಲ್ಲಿ ಕೇವಲ ತಾಪಂ ಅಧ್ಯಕ್ಷರಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಅವರೇ ಮಾತನಾಡುವುದಾದರೆ ನಾವೇಕೆ ಇಲ್ಲಿಗೆ ಬರಬೇಕೆಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೂಡಿಗೆರೆ ತಾಪಂ ಅಧ್ಯಕ್ಷ ರತನ್ ಕುಮಾರ್, ತಾಪಂ ಸದಸ್ಯರೂ ಜಿಪಂ ಸದಸ್ಯರೇ ಆಗಿದ್ದಾರೆಂದು ಹೇಳಿದರು. ಇದಕ್ಕೆ ಎಲ್ಲ ತಾಪಂ ಸದಸ್ಯರೂ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಎಲ್ಲರೂ ಮಾತನಾಡಲು ಆರಂಭಿಸಿದಾಗ ಸಭೆಯಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿತ್ತು. ಹಾಗಾಗಿ, ಅಧ್ಯಕ್ಷೆ ಸುಜಾತಾ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರು ನೀಡಿದ್ದ ದೂರಿನನ್ವಯ ತನಿಖೆ ನಡೆಸಲಾಗಿದೆ. ಬಿಇಒ ತಪ್ಪು ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ತಾಲೂಕು ಮಟ್ಟದ ಅಧಿಕಾರಿ ಆಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿಗೆ ಅವಕಾಶವಿಲ್ಲ. ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.•ಎಸ್.ಅಶ್ವತಿ,
ಜಿಪಂ ಸಿಇಒ