Advertisement

ಅನುದಾನಕ್ಕಾಗಿ ಸಿಎಂ ಬಳಿ ಅಕಾಡೆಮಿ ಮುಖ್ಯಸ್ಥರ ನಿಯೋಗ

03:11 PM Feb 10, 2020 | Naveen |

ಚಿಕ್ಕಮಗಳೂರು: ಜಾನಪದ ಅಕಾಡೆಮಿ ಸೇರಿದಂತೆ ವಿವಿಧ ಪ್ರಾಧಿಕಾರ, ಪ್ರತಿಷ್ಠಾನಗಳಿಗೆ ಹೆಚ್ಚಿನ ಅನುದಾನಕ್ಕೆ ಆಗ್ರಹಿಸಿ ಸದ್ಯದಲ್ಲೇ ಅಕಾಡೆಮಿ ಪ್ರಮುಖರನ್ನು ಸಿಎಂ ಬಳಿಗೆ ಕರೆದೊಯ್ಯಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದರು.

Advertisement

ಭಾನುವಾರ ತಾಲೂಕಿನ ಕೆ.ಬಿ.ಹಾಳ್‌ನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಜಿಲ್ಲಾ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ತಾಯಿ ಬೇರಿದ್ದಂತೆ ಇದರಿಂದಲೇ ಬೇರೆ ಬೇರೆ ಕಲೆಗಳು ವಿಕಾಸಗೊಂಡಿವೆ. ಜಾನಪದದಲ್ಲಿ ಬದುಕಿನ ಭಾವನೆಗಳು ವ್ಯಕ್ತವಾಗುತ್ತವೆ. ಜಾನಪದ ಭೂಮಿ, ತಾಯಿ, ಪತ್ನಿ, ದೇವರ ಜತೆಗೆ ಸಂಬಂಧವನ್ನು ಹೊದಿದೆ ಎಂದರು.

ವ್ಯವಹಾರವನ್ನೇ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಬರಡಾಗುತ್ತದೆ. ಹಾಗಾಗಬಾರದು ಎಂದರೆ ಮತ್ತೆ ಜಾನಪದದತ್ತ ಹೊರಳಬೇಕು. ಆ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಅದರಲ್ಲಿ ರಾಜ್ಯಮಟ್ಟದ ಕಲಾವಿದರು ಕಲೆಗಳ ಅನಾವರಣ ಮಾಡಲಿದ್ದಾರೆ ಎಂದು ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ, ಜಾನಪದ ಅಕಾಡೆಮಿ ರಾಜ್ಯದಲ್ಲಿ ನಶಿಸುತ್ತಿರುವ ಜನಪದ ಕಲೆ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಡೀ ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಜಾನಪದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದೆ.

ಚರ್ಮವಾದ್ಯ ನುಡಿಸುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜಾತ್ರೆಯಲ್ಲಿ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಕಾಡೆಮಿಗೆ ಸರಕಾರದಿಂದ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

ಕಜಾಪ ರಾಜ್ಯಾಧ್ಯಕ್ಷ ತಿಮ್ಮೇಗೌಡ ಮಾತನಾಡಿ, ಕಳೆದ 40 ವರ್ಷದಿಂದ ಜಾನಪದ ಉಳಿಸುವ ನಿಟ್ಟಿನಲ್ಲಿ ರಾಜ್ಯದ್ಯಂತ ಜಾನಪದ ಉತ್ಸವ ನಡೆಸಲಾಗುತ್ತಿದೆ. ನಾಡಿನಲ್ಲಿ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಉಳಿಯಬೇಕಾದರೆ ಸಮಾಜ ಎಲೆಮರೆ ಕಾಯಿಯಂತಿದ್ದು ಜನಪದವನ್ನು ಆಧುನಿಕತೆಯ ನಡುವೆಯೂ ಕಾಪಾಡಿಕೊಂಡು ಬಂದಿರುವ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಆಗ ಮಾತ್ರ ಜಾನಪದ ಉಳಿಯುತ್ತದೆ ಎಂದರು.

Advertisement

ಜಾನಪದ ಕಲಾವಿದರಾದ ನಾಗೇಶ್‌ಗೌಡ, ಭಾಗ್ಯಶ್ರೀ, ಪ್ರದೀಪ್‌, ನಂಜುಂಡಸ್ವಾಮಿ, ಆನಂದ್‌, ರುದ್ರಮ್ಮ, ಜಯಲಲಿತ, ಕೆ.ಜೆ.ಮಂಜುನಾಥ್‌, ಶಿವಶಂಕರಭಟ್‌ ಮತ್ತು ತಾಲೂಕು ಕಜಾಪ ಅಧ್ಯಕ್ಷರನ್ನು ಗೌರವಿಸಲಾಯಿತು. ಕೆ.ಬಿ.ಹಾಳ್‌ ಗ್ರಾಮದ ಪ್ರಮುಖ ಬೀದಿಯಲ್ಲಿ ವಿವಿಧ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶಾಸಕ ಎಂ.ಪಿ.ಕುಮಾರಸ್ವಾಮಿ ಒಗಟು ಮತ್ತು ಜಾನಪದ ಗೀತೆ ಹಾಡುವ ಮೂಲಕ ರಂಜಿಸಿದರು. ಜಿಪಂ ಸದಸ್ಯರಾದ ಹಿರಿಗಯ್ಯ, ರವೀಂದ್ರ ಬೆಳವಾಡಿ, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಡಾ| ಡಿ.ಎಲ್‌ ವಿಜಯ್‌ಕುಮಾರ್‌, ತಾ.ಪಂ ಉಪಾಧ್ಯಕ್ಷೆ ದೀಪಾ ನಾಗೇಶ್‌, ಸದಸ್ಯೆ ಶುಭಾ ಸತ್ಯಮೂರ್ತಿ, ರೇಖಾ ಅನಿಲ್‌, ಮಹೇಶ್‌, ಗ್ರಾಪಂ ಅಧ್ಯಕ್ಷ ಶಿವಕುಮಾರ್‌, ಎಐಟಿ ನಿರ್ದೇಶಕ ಡಾ.ಸಿ.ಕೆ.ಸುಬ್ಬರಾಯ ಮತ್ತಿತರರು ಉಪಸ್ಥಿತರಿದ್ದರು.

ಕಜಾಪ ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ನಿರೂಪಿಸಿದರು. ಶಿಕ್ಷಕ ಶಿವಶಂಕರ್‌ ಸ್ವಾಗತಿಸಿದರು. ವಿಜಯ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next