ಚಿಕ್ಕಮಗಳೂರು: ವಿಶೇಷ ಅಗತ್ಯವುಳ್ಳ ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಮಕ್ಕಳ ರಕ್ಷಣಾ ಘಟಕದಿಂದ ಒಂದು ಸಾವಿರ ರೂ. ಆರ್ಥಿಕ ನೆರವು ನೀಡುತ್ತಿದ್ದು, ಯೋಜನೆಯನ್ನು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಎಚ್ಐವಿ ಬಾಧಿತ, ಕುಷ್ಟರೋಗ ಪೀಡಿತ, ಜೈಲು ವಾಸಿ ಹಾಗೂ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಪಾಲನೆ-ಪೋಷಣೆ ಮತ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣದ ಅಗತ್ಯತೆಗಳನ್ನು ಪೂರೈಸಲು ಹಾಗೂ ಮಕ್ಕಳ ಜೀವನ ಉತ್ತಮಗೊಳಿಸಲು ಆರ್ಥಿಕ ಸೌಲಭ್ಯವಾಗಿ ಪ್ರತಿ ಮಗುವಿಗೆ ಮಾಸಿಕ ಒಂದು ಸಾವಿರ ರೂ. ಅನ್ನು ಮೂರು ವರ್ಷಗಳ ಅವಧಿ ವರೆಗೆ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಅರ್ಹ ಮಕ್ಕಳಿಗೆ ಸಮರ್ಪಕವಾಗಿ ತಲುಪಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಅಭಯ ಮಕ್ಕಳ ನಿಧಿ ಯೋಜನೆಯಡಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆರೋಗ್ಯ ಸುಧಾರಣೆಗೆ 15 ಸಾವಿರ ರೂ. ನೀಡುತ್ತಿದ್ದು, ತುರ್ತು ಚಿಕಿತ್ಸೆಗೆ 5ಸಾವಿರ ರೂ. ನೀಡಲಾಗುತ್ತದೆ. ಆದರೆ, 2019-20ನೇ ಸಾಲಿನಲ್ಲಿ ಪ್ರಧಾನ ಕಚೇರಿಯಿಂದ ಹಣ ಬಿಡುಗಡೆಯಾಗದ ಕಾರಣ ವೈದ್ಯಕೀಯ ಭತ್ಯೆ ನೀಡಲಾಗುತ್ತಿಲ್ಲ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪತ್ರ ವ್ಯವಹಾರದ ಮೂಲಕ ಅನುದಾನ ಬಿಡುಗಡೆ ಮಾಡಲು ಪ್ರಧಾನ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತುತ ಬಜೆಟ್‌ನಲ್ಲಿ ಜಿಲ್ಲೆಗೆ ಬಾಲಕಿಯರ ಬಾಲ ಮಂದಿರ ನಿರ್ಮಿಸಲು ಒಂದು ಕೋಟಿ ರೂ. ಅನುದಾನ ಬಂದಿದ್ದು, ಸ್ಥಳ ಗುರುತಿಸಿ ಬಾಲ ಮಂದಿರ ನಿರ್ಮಿಸುವವರೆಗೂ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ನಡೆಸುವಂತೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ಈ ಹಿಂದೆ ಮಕ್ಕಳ ವಿಶೇಷ ನ್ಯಾಯಾಲಯವನ್ನು ಮಕ್ಕಳ ಸ್ನೇಹಿ ನ್ಯಾಯಾಲಯವನ್ನಾಗಿ ಪರಿವರ್ತಿಸಲು ಮಕ್ಕಳ ಕಲ್ಯಾಣ ಅಧಿಕಾರಿಗಳು ಪ್ರಧಾನ ಮತ್ತು ಜಿಲ್ಲಾ ಸೇಷನ್ಸ್ ನ್ಯಾಯಾಧೀಶರ ಜೊತೆ ಚರ್ಚಿಸಲಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪೂರ್ಣಗೊಂಡ ನಂತರ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದು ಬದಲಿಸಿಕೊಡುವುದಾಗಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.