ಚಿಕ್ಕಮಗಳೂರು: ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದು, ಸಂಕಷ್ಟದ ಸಂದರ್ಭದಲ್ಲಿ ಉಳ್ಳವರು, ನೆರೆಹೊರೆಯವರಿಗೆ ತಮ್ಮ ಕೈಲಾದ ಸಹಾಯ ಮಾಡಿ ಬಡವರ ಕಷ್ಟಕ್ಕೆ ಸ್ಪಂದಿಸಬೇಕೆಂದು ಸಚಿವ ಸಿ.ಟಿ. ರವಿ ಹೇಳಿದರು.
ಭಾನುವಾರ ನಗರದ ದಂಟರಮಕ್ಕಿ ಕಾಲೋನಿ, ಉಂಡೇದಾಸರಹಳ್ಳಿ, ಕೋಟೆ ಭಾಗದಲ್ಲಿ ರಂಭಾಪುರಿ ಪೀಠದ ರೇಣುಕಾಚಾರ್ಯ ಟ್ರಸ್ಟ್ ಹಾಗೂ ಸ್ಥಳೀಯ ಮುಖಂಡರುಗಳ ನೆರವಿನೊಂದಿಗೆ 500ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.
ಕೊರೊನಾದಿಂದ ಅಮೇರಿಕಾ, ಇಟಲಿ, ಚೀನಾ ಸೇರಿದಂತೆ ಅನೇಕ ಅಭಿವೃದ್ಧಿ ರಾಷ್ಟ್ರಗಳೇ ತತ್ತರಿಸಿ ಹೋಗಿದೆ. ಅನಿರೀಕ್ಷಿತವಾಗಿ ಹರಡುವ ಮೂಲಕ ಮನುಕುಲದ ಮೇಲೆ ಗಾಢ ಪರಿಣಾಮ ಬೀರಿದ್ದು ಇದರ ನಿಯಂತ್ರಣಕ್ಕೆ ಸದ್ಯ ಯಾವುದೇ ಔಷಧಗಳು ಲಭ್ಯವಿಲ್ಲದ ಕಾರಣ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕಿನ ತಡೆಗೆ ಶ್ರಮಿಸಬೇಕು ಎಂದರು.
ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಮಾಡಿದೆ. ಇದರಿಂದಾಗಿ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರರವರೆಗೂ ಆರ್ಥಿಕವಾಗಿ ಪೆಟ್ಟು ನೀಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು 1.ಲಕ್ಷ 70 ಸಾವಿರ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ ಬಡವರಿಗೆ ಉಚಿತ ಅಕ್ಕಿ ಹಾಗೂ ಮಹಿಳೆಯರ ಜನ್‌ಧನ್ ಖಾತೆಗೆ ರೂ. 500, ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ ಹಣ, ಉಚಿತ ಹಾಲು ಮತ್ತಿತರ ಯೋಜನೆಗಳ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು. ಲಾಕ್‌ಡೌನ್‌ನಿಂದಾಗಿ ಜನ ಅತಂತ್ರ ಸ್ಥಿತಿಯಲ್ಲಿದ್ದು, ಆರ್ಥಿಕ ಸ್ಥಿತಿಗತಿ ಉಳ್ಳವರು, ನೆರೆಹೊರೆಯವರಿಗೆ ಬಡವರಿಗೆ, ಅಸಹಾಯಕರಿಗೆ ತಮ್ಮ ಕೈಲಾದ ನೆರವು ನೀಡಿ ಕಷ್ಟಕ್ಕೆ ಸ್ಪಂದಿಸಬೇಕು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಕೆಲ ಸ್ಥಳೀಯ ಸಂಘ-ಸಂಸ್ಥೆಗಳು, ಟ್ರಸ್ಟ್, ಸ್ಥಳೀಯ ಮುಖಂಡರುಗಳು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿವೆ ಎಂದ ಅವರು, ರಂಭಾಪುರಿ ಪೀಠದ ಗೌರಮ್ಮ ಬಸವೇಗೌಡ ಅಧ್ಯಕ್ಷತೆಯ ರೇಣುಕಾಚಾರ್ಯ ಟ್ರಸ್ಟ್ ಕೂಡ ಇಂತಹ ಮಹಾಕಾರ್ಯಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿರುವುದು ಸಂತೋಷದ ವಿಷಯ ಎಂದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೂ ವಿಸ್ತರಣೆ ಮಾಡಲಾಗುವುದು ಎಂದರು.
ಸಂಘ-ಸಂಸ್ಥೆಗಳು ನೀಡುತ್ತಿರುವ ನೆರವನ್ನು ಯಾರೊಬ್ಬರು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು. ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರ್ವಜನಿಕ ಸ್ವಚ್ಛತೆಯ ಜೊತೆಗೆ ವೈಯಕ್ತಿಯ ಸcತ್ಛತೆಗೂ ಹೆಚ್ಚಿನ ಗಮನ ನೀಡಿ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ರೇಣುಕಾಚಾರ್ಯ ಟ್ರಸ್ಟ್‌ನ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿದರು. ಮುಖಂಡರಾದ ಮೋಹನ್, ವೇಣುಗೋಪಾಲ್ ನಾಯ್ಡು, ನಗರ ಸಭೆ ಮಾಜಿ ಅಧ್ಯಕ್ಷ ದೇವರಾಜ್‌ಶೆಟ್ಟಿ, ಕೋಟೆರಂಗಣ್ಣ, ಕೋಟೆ ಕೃಷ್ಣಪ್ಪ, ಶ್ರೀನಿವಾಸ್, ಆನಂದ್ ಶೆಟ್ಟಿ, ಲಕ್ಷ್ಮಮ್ಮ ಉಪಸ್ಥಿತರಿದ್ದರು