ಚಿಕ್ಕಮಗಳೂರು: ಸರ್ಕಾರಿ ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ನಗರಸಭೆ ಜೆಸಿಬಿ ಮೂಲಕ ಏಕಾಏಕಿ ನೆಲಸಮ ಮಾಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು.
ನಗರದ ಜಿಪಂ ಕಚೇರಿ ಮುಂಭಾಗದಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ನಗರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಏಕಾಏಕಿ ನಮ್ಮ ಗುಡಿಸಲುಗಳನ್ನು ಕಡೆವಿ, ಆಹಾರ ಸಾಮಗ್ರಿಗಳನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ನಗರದ ಹೌಸಿಂಗ್ ಬೋರ್ಡ್ ಬಡಾವಣೆ ಸಮೀಪದ ಜಿಪಂ ಕಚೇರಿ ಎದುರಿನಲ್ಲಿರುವ ಸರ್ಕಾರಿ ಖಾಲಿ ಜಾಗದಲ್ಲಿ ನಿವೇಶನ ರಹಿತರು 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ಕಳೆದ 10 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದೆವು. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಗುಡಿಸಲುಗಳಲ್ಲೇ ವಾಸವಾಗಿದ್ದು ಸಂಘ- ಸಂಸ್ಥೆಗಳು ನೀಡಿದ ಆಹಾರ ಸಾಮಗ್ರಿಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದೆವು.
ಗುರುವಾರ ನಗರಸಭೆ ಅಧಿಕಾರಿಗಳು ಒಂದು ಜೆಸಿಬಿ ಹಾಗೂ ಒಂದು ಟ್ರ್ಯಾಕ್ಟರ್ ಕಳುಹಿಸಿ ಏಕಾಏಕಿ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ. ಗುಡಿಸಲಿನಲ್ಲಿದ್ದ ಆಹಾರ ಸಾಮಗ್ರಿಗಳು ಮಣ್ಣುಪಾಲಾಗಿವೆ. ಎರಡು ಗುಡಿಸಲುಗಳನ್ನು ಮಾತ್ರ ನೆಲಸಮ ಮಾಡದೇ ಬಿಟ್ಟಿದ್ದಾರೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ 40 ಮಂದಿ ಎರಡೇ ಗುಡಿಸಿಲಿನಲ್ಲೇ ಆಶ್ರಯ ಪಡೆದುಕೊಂಡಿದ್ದೇವೆ ಎಂದರು.
ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಗುಡಿಸಲುಗಳನ್ನು ಕೆಡವಿ ನಗರಸಭೆ ಮುಂದಾಗಿರುವುದು ಅಮಾನವೀಯ ಕ್ರಮವಾಗಿದೆ. ಮನುಷ್ಯತ್ವಕ್ಕೆ ಬೆಲೆ ನೀಡದೆ ಗುಡಿಸಲು ಕೆಡವಿ ಹಾಕಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸರ್ಕಾರವೇ ಆದೇಶ ನೀಡಿದೆ. ಎರಡು ಗುಡಿಸಿಲಿನಲ್ಲಿ 40 ಜನರು ವಾಸಿಸುವಂತೆ ಮಾಡಿ ಸರ್ಕಾರದ ಆದೇಶವನ್ನೇ ನಗರಸಭೆ ಅಧಿಕಾರಿಗಳು ಉಲ್ಲಂಘನೆ ಮಾಡಿದ್ದಾರೆ.
ಕೆ.ಟಿ. ರಾಧಾಕೃಷ್ಣ,
ಬಿಎಸ್‌ಪಿ ಜಿಲ್ಲಾಧ್ಯಕ್ಷ
ಗುಡಿಸಲು ನಿರ್ಮಿಸಿಕೊಂಡ ಜಾಗ ರಿಂಗ್ ರಸ್ತೆಗೆ ಸಂಬಂಧಿಸಿದ ಜಾಗವಾಗಿದೆ. ನಾಲ್ಕು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡಿರುವ ಐದು ಗುಡಿಸಲುಗಳನ್ನು ಹಾಗೆಯೇ ಬಿಟ್ಟಿದ್ದೇವೆ. ಐದು ಮಂದಿ ಅಕ್ರಮ ಗುಡಿಸಲು ಹಾಕಿದ್ದರು. 12 ಮಂದಿ ಗುಡಿಸಲು ಹಾಕುತ್ತಿದ್ದರು. ಅವುಗಳನ್ನು ತೆರವುಗೊಳಿಸಿದ್ದೇವೆ.
ಚಂದ್ರಶೇಖರ್,
ಪೌರಾಯುಕ್ತ