ಚಿಕ್ಕಮಗಳೂರು: ದುಡಿದು ಕುಟುಂಬ ನಿರ್ವಹಿಸಬೇಕಾದ ಗಂಡಸರಿಗೆಲ್ಲ ಅನಾರೋಗ್ಯ. ಇಡೀ ಕುಟುಂಬಕ್ಕೆ ಮಹಿಳೆಯರೇ ಜೀವನಾಧಾರ. ಮನೆ ತುಂಬ ಜನ. ಮಹಿಳೆಯರು ದುಡಿದರೇ ಎರಡು ಹೊತ್ತಿನ ಊಟ ಇಲ್ಲವಾದಲ್ಲಿ ಉಪವಾಸ.
Advertisement
ಇದು ಸಿಎಂ ಕುಮಾರಸ್ವಾಮಿ ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ತಾಲೂಕಿನ ಬೆಳವಾಡಿ ಗ್ರಾಮದ ರಂಗಪ್ಪ ಅವರ ಮನೆಯ ಸದ್ಯದ ಸ್ಥಿತಿ.
Related Articles
Advertisement
ಮನೆ ತುಂಬ ಜನ: ಈ ಮನೆಯಲ್ಲಿ ರಂಗಪ್ಪ ಅವರ ಪತ್ನಿ ವಯೋವೃದ್ಧೆ ತಿಮ್ಮಮ್ಮಳೇ ಹಿರಿಯರಾಗಿದ್ದಾರೆ. ರಂಗಪ್ಪ ತಿಮ್ಮಮ್ಮ ಅವರ ಮಗಳಿಗೆ ಮದುವೆಯಾಗಿದ್ದರೂ ಆಕೆ ಪತಿಯೊಂದಿಗೆ ಇವರ ಮನೆಯಲ್ಲಿಯೇ ನೆಲೆಸಿದ್ದಾರೆ. ಆಕೆಯ ಪತಿಗೂ ಆರೋಗ್ಯ ಸರಿ ಇಲ್ಲ. ಅವರ ಇಬ್ಬರು ಮಕ್ಕಳು ಹಾಗೂ ತಿಮ್ಮಮ್ಮಳ ಮೊದಲ ಮಗಳ ಪುತ್ರಿಯೂ ಚಿಕ್ಕ ವಯಸ್ಸಿನಿಂದಲೂ ಇಲ್ಲಿಯೇ ಬೆಳೆದಿದ್ದಾಳೆ.
ಕುಮಾರಸ್ವಾಮಿಯವರು ಇವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ತಿಮ್ಮಮ್ಮಳ ಮೊಮ್ಮಗಳು ಶಿಲ್ಪಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಆಕೆಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಈಗ ಆಕೆ ಬಿ.ಕಾಂ ಪೂರ್ಣಗೊಳಿಸಿದ್ದಾಳೆ. ಕೆಲಸಕ್ಕಾಗಿ ಹಲವು ಬಾರಿ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಸಿಎಂ ನೀಡಿದ್ದ ಭರವಸೆ ಬಗ್ಗೆ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಮನೆಯ ಗಂಡಸರೆಲ್ಲ ಅನಾರೋಗ್ಯದಿಂದ ಬಳಲುತ್ತಿದ್ದು, ತಿಮ್ಮಮ್ಮಳ ಮಗಳು ಹಾಗೂ ಮೊಮ್ಮಗಳು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ.
ಗ್ರಾಮದಲ್ಲೂ ಆಗಿಲ್ಲ ಕೆಲಸ: ಕುಮಾರಸ್ವಾಮಿಯವರು ವಾಸ್ತವ್ಯ ಮಾಡಿದ್ದ ಮನೆಯವರಿಗಷ್ಟೇ ಅಲ್ಲ ಗ್ರಾಮಕ್ಕೂ ಸಹ ಯಾವುದೇ ಉಪಯೋಗವಾಗಿಲ್ಲ. ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎಂಬ ಕಾರಣದಿಂದ ಗ್ರಾಮ ಪಂಚಾಯತ್‌ನಿಂದ ಸುಮಾರು 2 ಲಕ್ಷ ರೂ. ವೆಚ್ಚ ಮಾಡಿ ಸಿದ್ಧತೆ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಹಾಗೂ ಅವರೊಂದಿಗೆ ಬಂದಿದ್ದ ಅಧಿಕಾರಿಗಳಿಗೆ ಸ್ನಾನ ಇತ್ಯಾದಿಗಳಿಗಾಗಿ ಗ್ರಾಮ ಪಂಚಾಯತ್‌ನಿಂದಲೇ ಸಾವಿರಾರು ರೂ. ಖರ್ಚು ಮಾಡಿ ಬಕೆಟ್, ಟವೆಲ್, ಸೋಪು, ಪೇಸ್ಟ್ ಇನ್ನಿತರೆ ವಸ್ತುಗಳನ್ನು ಖರೀದಿಸಲಾಗಿತ್ತು. ಇಡೀ ಗ್ರಾಮವನ್ನು ತಳಿರು ತೋರಣ, ದೀಪಗಳಿಂದ ಅಲಂಕರಿಸಲಾಗಿತ್ತು ಎಂದು ಜನ ನೆಪಿಸಿಕೊಳ್ಳುತ್ತಾರೆ.