ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ಕುರ್ಚಿ ಗಲಾಟೆ ನಡೆಯಿತು. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಸಮಾಧಾನ ಮಾಡಲು ಹೈರಾಣಾದರು.
ಉಸ್ತುವಾರಿ ಸಚಿವರು ಸಭೆಯಲ್ಲಿ ಆಸೀನರಾಗುತ್ತಿದ್ದಂತೆ ಶಾಸಕರು ವೇದಿಕೆ ಕುರ್ಚಿಯಲ್ಲಿ ಆಸೀನರಾದರು. ಈ ವೇಳೆ ಸಿ.ಟಿ.ರವಿ ಹಾಗೂ ಭೋಜೇಗೌಡ ಈ ಹಿಂದಿನ ಎಲ್ಲಾ ಸಭೆಗಳಲ್ಲಿ ಶಾಸಕರು ಕೆಳಗಿನ ಆಸನಗಳಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ ಎಂದರು.
ಈ ವೇಳೆ ಕಡೂರು ಶಾಸಕ ಕೆ.ಎಸ್. ಆನಂದ್ ಶಾಸಕರ ಘನತೆ ಎತ್ತಿ ಹಿಡಿಯುವ ಉದ್ದೇಶದಿಂದ ಮೇಲೆ ಕುಳಿತುಕೊಳ್ಳಬೇಕು. ವಿಧಾನ ಪರಿಷತ್ ಸದಸ್ಯರ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲ ಎನ್ನುತ್ತಿದ್ದಂತೆ ಸಿ.ಟಿ.ರವಿ ಮತ್ತು ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ವೇದಿಕೆ ಮೇಲೆ ಕೂರಬೇಕೆ ಅಥವಾ ಕೆಳಗೆ ಕೂರಬೇಕೆ ಎನ್ನುವ ವಿಚಾರ ಸಭೆಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದಿದೆ ಎಂದು ಸಿಇಓ ಸಭೆಗೆ ತಿಳಿಸಿದರು.
ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ಈ ಗೊಂದಲಕ್ಕೆ ಸ್ಪಷ್ಟನೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸಲಾಗುವುದು ಎಂದರು. ಬಳಿಕ ಸಿ.ಟಿ.ರವಿ ಮತ್ತು ಭೋಜೇಗೌಡ ವೇದಿಕೆ ಕೆಳಗಿನ ಖುರ್ಚಿಯಲ್ಲಿ ಕುಳಿತರು. ಗೊಂದಲದ ಸ್ಪಷ್ಟತೆ ಪಡೆದು ಮುಂದಿನ ಸಭೆಯಲ್ಲಿ ಅನುಸರಿಸೋಣ ಈಗ ವೇದಿಕೆಗೆ ಬನ್ನಿ ಎಂದು ಜಾರ್ಜ್ ಮತ್ತೆ ಮನವಿ ಮಾಡಿದರು. ಆದರೆ ಸಿ.ಟಿ.ರವಿ ಮತ್ತು ಭೋಜೇಗೌಡ ಕೆಳಗಿನ ಆಸನದಲ್ಲೆ ಕುಳಿತು ಸಭೆಯಲ್ಲಿ ಪಾಲ್ಗೊಂಡರು.