ಚಿಕ್ಕಮಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಬಜೆಟ್ ಮಂಡನೆ ಮಾಡಲಿದ್ದು, ಕೇಂದ್ರ ಬಜೆಟ್ ಕಡೆ ಕಾಫಿನಾಡಿನ ಜನರ ಚಿತ್ತ ನಟ್ಟಿದೆ. ಜಿಲ್ಲೆಯ ಕಾಫಿಬೆಳೆ ಉತ್ತೇಜಿಸಲು ಕೇಂದ್ರ ಸರ್ಕಾರ ಅನುದಾನ ನೀಡಲಿದೆಯೇ ಎಂದು ನೋಡಬೇಕಿದೆ.
ಜಿಲ್ಲೆ ಕಾಫಿಗೆ ಪ್ರಸಿದ್ಧಿ ಪಡೆದಿದ್ದು, ಕಳೆದ ಐದಾರು ವರ್ಷಗಳಿಂದ ಕಾಫಿ ಉದ್ಯಮ ಕಷ್ಟಕ್ಕೆ ಸಿಲುಕಿದೆ.
ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಬೆಲೆ ಕುಸಿತ, ರಸಗೊಬ್ಬರ ರಾಸಾಯನಿಕಗಳ ಬೆಲೆ ಏರಿಕೆ, ಕಾರ್ಮಿಕರ ಸಮಸ್ಯೆ, ಬ್ಯಾಂಕ್ ಸಾಲ ಹೀಗೆ ಅನೇಕ ಸಮಸ್ಯೆಗಳಿಂದ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಈ ಉದ್ಯಮ ಅವಲಂಬಿಸಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.
ಆದರೆ ಉದ್ಯಮ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕಾರ್ಮಿಕರ ಬದುಕು ದುಸ್ತರವಾಗಿದೆ. ಕಾಫಿ ಬೆಳೆಗಾರರ ಮತ್ತು ಉದ್ಯಮದ ರಕ್ಷಣೆಗೆ ವಿದರ್ಭ ಪ್ಯಾಕೇಜ್ ಮಾದರಿಯಲ್ಲಿ ಕೇಂದ್ರ ಸರ್ಕಾರ ಅನುದಾನ ನೀಡಬೇಕು ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಬೆಳೆಗಾರರು ಅನೇಕ ಬಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕಾಫಿ ಬೆಳೆಗಾರರ ರಕ್ಷಣೆಗೆ ಅನುದಾನ ಅಥವಾ ವಿಶೇಷ ಅನುದಾನ ಘೋಷಣೆಯಾಗಲಿದೆಯೇ ಎಂದು ನೋಡಬೇಕಿದೆ. ಜಿಲ್ಲೆಯಲ್ಲಿ ಕಾಫಿ ಬೆಳೆಯ ಜೊತೆಗೆ ಸಾಂಬಾರು ಪದಾರ್ಥಗಳಾದ ಕಾಳುಮೆಣಸು, ಏಲಕ್ಕಿ ಹಾಗೂ ಟೀಯನ್ನು ಬೆಳೆಯಲಾಗುತ್ತಿದೆ. ಈ ಬೆಳೆಗಳ ವ್ಯಾಪಾರ- ವಹಿವಾಟಿಗೆ ಅನುಕೂಲವಾಗುವಂತೆ ಸ್ಪೈಸ್‌ಪಾರ್ಕ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ.
ಈ ಹಿಂದೆ ನಿರ್ಮಲಾ ಸೀತಾರಾಮನ್ ಅವರು ವಾಣಿಜ್ಯ ಸಚಿವರಾಗಿದ್ದಾಗ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣದ ಭರವಸೆ ನೀಡಿದ್ದು, ಈ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪವಾಗಲಿದೆಯೇ ಎಂದು ನೋಡಬೇಕಿದೆ. ಜಿಲ್ಲೆಯಲ್ಲಿ ರೈಲು ಸಂಚಾರವಿದ್ದರೂ ನೇರವಾಗಿ ಚಿಕ್ಕಮಗಳೂರು ನಗರದಿಂದ ಬೆಂಗಳೂರಿಗೆ ರೈಲುಗಾಡಿ ಓಡಾಡುತ್ತಿಲ್ಲ. ಇದರಿಂದ ಬೆಂಗಳೂರಿಗೆ ಓಡಾಡಬೇಕಾದರವರಿಗೆ ತೊಂದರೆಯಾಗುತ್ತಿದ್ದು, ಚಿಕ್ಕಮಗಳೂರು ಮತ್ತು ಬೆಂಗಳೂರು ನಗರಕ್ಕೆ ರಾತ್ರಿ ರೈಲುಗಾಡಿ ಬಿಡುವಂತೆ ಜನರು ಅನೇಕ ಬಾರಿ ಒತ್ತಾಯಿಸಿದ್ದಾರೆ. ಚಿಕ್ಕಮಗಳೂರು ನಗರದಿಂದ ಬೇಲೂರು ವರೆಗೂ ರೈಲುಮಾರ್ಗ ನಿರ್ಮಿಸಿ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾರ್ಕಳ, ಶೃಂಗೇರಿ ಹಾಗೂ ಶಿವಮೊಗ್ಗಕ್ಕೆ ರೈಲುಮಾರ್ಗ ನಿರ್ಮಿಸಲು ಸಮೀಕ್ಷೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಉಲ್ಲೇಖ ಮಾಡಲಿದೆಯೇ ಎಂದು ಜನರು ಕಾತುರರಾಗಿದ್ದಾರೆ.
ಜಿಲ್ಲೆ ವಾಣಿಜ್ಯೋದ್ಯಮಕ್ಕೆ ಹೆಸರು ಪಡೆದಿದ್ದು, ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಿರುವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಕೆಲವೊಂದಿಷ್ಟು ಕಾಮಗಾರಿ ನಡೆದು ಅರ್ಧಕ್ಕೆ ನಿಂತಿದೆ. ಕಿರು ವಿಮಾನ ನಿಲ್ದಾಣ ಕಾಮಗಾರಿ ಮುಂದುವರಿಸಲು ಬಜೆಟ್‌ನಲ್ಲಿ ಹಣ ನೀಡಲಿದೆಯೇ ಎಂದು ನೋಡಬೇಕಿದೆ. ಈ ಎಲ್ಲಾ ಕಾರಣಗಳಿಂದ ಇಂದು ಮಂಡನೆಯಾಗುವ ಕೇಂದ್ರ ಬಜೆಟ್‌ನತ್ತಾ ಇಡೀ ಜಿಲ್ಲೆಯ ಜನತೆಯ ಚಿತ್ತ ನೆಟ್ಟಿದೆ.
ಓದಿ: ಸಶಕ್ತ ದೇಶದ ಪರಿಕಲ್ಪನೆಗೆ ಪೂರಕ ಬಜೆಟ್: ಸಿ.ಟಿ ರವಿ