ಕಡೂರು: “ದಯವಿಲ್ಲದ ಧರ್ಮ ಯಾವುದಯ್ಯ ದಯವಿರಬೇಕು ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣ ಅವರ ವಚನದಂತೆ ಕೊರೊನಾ ಸಂಕಷ್ಟದಲ್ಲಿ ಜನರ ಆರೋಗ್ಯ ಮತ್ತು ಔಷಧಿಗೆ ಹೆಚ್ಚಿನ ಒತ್ತು ನೀಡಿದ್ದು, ಕಡೂರು- ಬಾಣಾವರ ಮಧ್ಯೆ ಇರುವ ಶ್ರೀ ಭಗವಾನ್ ಮಹಾವೀರ ಗೋಶಾಲೆಗೆ ಶಾಸಕ ಬೆಳ್ಳಿಪ್ರಕಾಶ್ ಭಾನುವಾರ ಭೇಟಿ ನೀಡಿ ಗೋವುಗಳಿಗೆ ಆಹಾರ ತಿನ್ನಿಸಿದರು.
ಮಾತು ಬಲ್ಲ ಮನುಷ್ಯ ತನ್ನ ಸಂಕಷ್ಟಗಳನ್ನು ಹೇಳಿಕೊಳ್ಳಬಹುದು. ಆದರೆ ಮೂಕಪ್ರಾಣಿಗಳ ಜೀವಕ್ಕೂ ಬೆಲೆ ಇದೆ ಎಂದು ಕೊರೊನಾ ಪರಿಸ್ಥಿತಿಯಲ್ಲಿ ನಡೆಸುತ್ತಿರುವ ಗೋಶಾಲೆಯ ಸಂಪೂರ್ಣ ಮಾಹಿತಿ ಪಡೆದ ಶಾಸಕರು ಒಂದು ಲೋಡ್ ಹಸಿ ಹುಲ್ಲು, 25 ಕ್ವಿಂಟಾಲ್ ಬೂಸವನ್ನು ಉಚಿತವಾಗಿ ನೀಡಿದರು.
ಗೋಶಾಲೆಯ ಪರವಾಗಿ ಮುರಳಿ ಕೊಠಾರಿ ಮತ್ತು ವ್ಯವಸ್ಥಾಪಕ ಮಹೇಶ್ ಶಾಸಕರ ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿ, ಕಳೆದ 12 ವರ್ಷಗಳಿಂದ ಗೋ ಶಾಲೆಯನ್ನು ತೆರೆದಿದ್ದು ಇದೀಗ ಸುಮಾರು 238 ವಿವಿಧ ಬಗೆಯ ಎತ್ತು, ಹಸು, ಕರು, ಎಮ್ಮೆ ಮತ್ತಿತರ ರಾಸುಗಳಿವೆ. ವಾರ್ಷಿಕ 34 ಲಕ್ಷ ರೂ. ವೆಚ್ಚವಾಗುತ್ತಿದ್ದು ತಿಂಗಳಿಗೆ ಕನಿಷ್ಟ 3.5 ಲಕ್ಷ ರೂ.ಗಳು ರಾಸುಗಳ ಆರೈಕೆಗೆ ವೆಚ್ಚವಾಗುತ್ತಿದೆ.
ಇದನ್ನೆಲ್ಲಾ ದಾನಿಗಳಿಂದ ಭರಿಸುತ್ತಿದ್ದು ಇದುವರೆಗೂ ಯಾವುದೇ ಸಮಸ್ಯೆ ಇಲ್ಲದಂತೆ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ರಾಸುಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಗೆ ಯಾವುದೇ ರೈತರು ತಮ್ಮ ರಾಸುಗಳನ್ನು ತಂದು ಬಿಟ್ಟಿಲ್ಲ. ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಅನೇಕ ಪೊಲೀಸ್ ಠಾಣೆಗಳಲ್ಲಿ ರಕ್ಷಣೆ ಮಾಡಿದ್ದ ಗೋವುಗಳನ್ನು ತಂದು ಬಿಟ್ಟಿದ್ದಾರೆ.
ನಮ್ಮ ಟ್ರಸ್ಟ್ ಹಲವಾರು ಮೊಕದ್ದಮೆಯನ್ನು ಎದುರಿಸಿ ಗೋವುಗಳನ್ನು ರಕ್ಷಿಸಿದೆ ಎಂದರು. ಗೋಪಾಲಕರ 6 ಕುಟುಂಬಗಳು ಗೋವುಗಳ ರಕ್ಷಣೆ, ಪೋಷಣೆಯಲ್ಲಿ ತೊಡಗಿಕೊಂಡಿದ್ದು, ಅನೇಕ ದಾನಿಗಳು ಅವರ ಕುಟುಂಬಗಳ ಹುಟ್ಟುಹಬ್ಬ ಮತ್ತಿತರ ಶುಭ ಕಾರ್ಯಗಳಲ್ಲಿ ಇಲ್ಲಿಗೆ ಬಂದು ಗೋವುಗಳನ್ನು ಪೂಜಿಸಿ ದಾನ ನೀಡುವುದು ವಾಡಿಕೆಯಾಗಿದೆ.
ಟ್ರಸ್ಟ್‌ನ ಅಧ್ಯಕ್ಷ ಮಾಣಿಕ್‌ಚಂದ್, ಸದಸ್ಯರಾದ ಕಡೂರು ಕೊಠಾರಿ ಮುರಳಿ, ಸಂಪತ್‌ರಾಜ್, ಕಿಶೋರ್ ಕುಮಾರ್, ಡಾ| ದಿನೇಶ್, ಡಾ| ಎಸ್ .ವಿ. ದೀಪಕ್, ಡಾ| ರವಿಕುಮಾರ್, ಶಾಮಿಯಾನ ಚಂದ್ರು, ಎಪಿಎಂಸಿ ರವಿಕುಮಾರ್ ಇದ್ದರು.