Advertisement
ಸಿನಿಮಾ ಹುಚ್ಚಿಗೆ ಬಿದ್ದು ಕೆಂಪು ಬಸ್ಸು ಹತ್ತಿಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರ ಅಲೆದವರು ಸಂಖ್ಯೆಗೆ ಲೆಕ್ಕವಿಲ್ಲ. ಹಾಗೆ ಬಂದವರಿಗೆಲ್ಲಾ ಅವಕಾಶ ಸಿಕ್ಕಿಲ್ಲ. ಕೆಲವೇ ಕೆಲವು ಮಂದಿಗೆ ಸಿಕ್ಕಿದೆಯಷ್ಟೇ. ಹೀಗೆ ಕೆಂಪು ಬಸ್ಸು ಹತ್ತಿಕೊಂಡು ಕಣ್ತುಂಬಾ ಕಲರ್‌ಫುಲ್ ಕನಸುಗಳೊಂದಿಗೆ ಗಾಂಧಿನಗರಕ್ಕೆ ಬಂದವರಲ್ಲಿ ಗುರುನಂದನ್ ಕೂಡಾ ಒಬ್ಬರು. ಸಾಕಷ್ಟು ಕಷ್ಟಪಟ್ಟ ಗುರುನಂದನ್‌ಗೆ ಈಗ ಒಳ್ಳೆಯ ದಿನಗಳು ಆರಂಭವಾಗಿವೆ. ಅವರು ನಾಯಕರಾಗಿ ನಟಿಸಿರುವ “ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ಗೆಲ್ಲುವ ಮೂಲಕ ಅವಕಾಶದ ಬಾಗಿಲು ತೆರೆದುಕೊಂಡಿದೆ.
– ನೋಡುವಷ್ಟು ದಿನ ನೋಡಿ, ಗಾಬರಿಯಾದ ತಂದೆ ತಾಯಿ ಹೀಗೊಂದು ಪ್ರಕಟಣೆ ಕೊಡುತ್ತಾರೆ. ಆಗಷ್ಟೇ 8ನೇ ಕ್ಲಾಸ್ ಓದುತ್ತಿದ್ದ ಮಗ ಕಾಣೆಯಾದರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ. ಪೂರ್ವಜರ ಆಶೀರ್ವಾದವೋ, ಅವರು ಮಾಡಿದ ಪುಣ್ಯದ ಫಲವೋ ಅದ್ಹೇಗೋ ಮಗ ವಾಪಾಸ್ ಬಂದುಬಿಡುತ್ತಾನೆ. ಆ ಪುಟ್ಟ ಬಾಲಕನನ್ನು ಕೂರಿಸಿಕೊಂಡು “ಹೇಳದೇ ಕೇಳದೇ ಎಲ್ಲೋಗಿದ್ದೆ ಮಗನೇ …ಯಾಕೆ ಕಾಣೆಯಾಗಿದ್ದೆ …’ ಎಂದು ಅಪ್ಪ-ಅಮ್ಮ ಕೇಳುವ ಹೊತ್ತಿಗೆ “ಆ್ಯಕ್ಟಿಂಗ್ …ಸಿನಿಮಾ …’ ಎಂಬ ಉತ್ತರ ಆ ಬಾಲಕನ ಬಾಯಿಂದ ಬರುತ್ತದೆ. ಎಂಟನೇ ಕ್ಲಾಸಿಗೆ ಸಿನಿಮಾ ಹುಚ್ಚು ಹತ್ತಿಸಿಕೊಂಡು ಕೆಂಪು ಬಸ್ಸು ಹತ್ತಿಕೊಂಡು ಬೆಂಗಳೂರಿಗೆ ಬಂದ ಆ ಹುಡುಗ ಕೊನೆಗೂ ತನ್ನ ಆಸೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಾಗಿ, ಎರಡನೇ ಸಿನಿಮಾದಲ್ಲಿ ನೂರು ದಿನದ ಖುಷಿ ಕಂಡ ಆ ಹುಡುಗ ಗುರುನಂದನ್. ಮುಂದೆ ಒಳ್ಳೆಯ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಆಸೆ ಹೊತ್ತಿದ್ದಾರೆ.
Related Articles
Advertisement
ಚಿಕ್ಕಮಗಳೂರ ಮಗಹಾಗೆ ನೋಡಿದರೆ ಗುರುನಂದನ್‌ಗೂ ಕನ್ನಡ ಚಿತ್ರರಂಗಕ್ಕೂ ಯಾವುದೇ ನಂಟಿಲ್ಲ. ಇದ್ದಿದ್ದೆಂದರೆ ಸಿನಿಮಾ ಬಗೆಗಿನ ಪ್ರೀತಿ, ತಾನು ಸಿನಿಮಾದಲ್ಲಿ ನಟಿಸಬೇಕೆಂಬ ಅಪಾರ ಬಯಕೆ. ಬಹುಶಃ ಅದೇ ಇವತ್ತು ಗುರುನಂದನ್ ಹೀರೋ ಆಗಲು ಕಾರಣ ಎಂದರೆ ತಪ್ಪಲ್ಲ. ಏಕೆಂದರೆ ಗುರುನಂದನ್ ಚಿಕ್ಕಮಗಳೂರಿನ ಒಂದು ಪುಟ್ಟ ಹಳ್ಳಿಯಲ್ಲಿ ಸ್ವತ್ಛಂದವಾಗಿ ಆಟವಾಡುತ್ತಾ, ಕಾಫಿ ಎಸ್ಟೇಟ್ ಸುಹಾಸನೆ ಆಸ್ವಾಧಿಸುತ್ತಾ ಬೆಳೆದ ಹುಡುಗ. ಸಿನಿಮಾ ಆಸೆ ಏನಾದರೂ ಇಲ್ಲದೇ ಇರುತ್ತಿದ್ದರೆ ಇವತ್ತು ಗುರುನಂದನ್ ತಮ್ಮ ತಂದೆ ಮಾಡಿದ ಕಾಫಿ ಎಸ್ಟೇಟ್ ನೋಡಿಕೊಂಡು ಊರಲ್ಲೇ ಕಾಫಿ ಹೀರುತ್ತಾ ಇರುತ್ತಿದ್ದಾರೇನೋ. ಆದರೆ ಗುರು ಆಸಕ್ತಿಯ ಕ್ಷೇತ್ರ ಸಿನಿಮಾವಾಗಿತ್ತು. ಎಂಟನೇ ಕ್ಲಾಸಿನಲ್ಲಿ ಮನೆಬಿಟ್ಟು ಬೆಂಗಳೂರಿಗೆ ಬಂದ ಗುರು ಆ ನಂತರ ಊರಿಗೆ ಹೋಗಿ ಪಿಯುಸಿವರೆಗೆ ಅಲ್ಲೇ ವ್ಯಾಸಂಗ ಮಾಡುತ್ತಾರೆ. ಜೊತೆಗೆ ಕಾಫಿ ತೋಟದಲ್ಲೂ ಕೆಲಸ ಮಾಡುತ್ತಾ ಕನಸುನ್ನು ಪೋಷಿಸುತ್ತಲೇ ಬರುತ್ತಾರೆ. ಸಿನಿಮಾ ನಮ್ಮದಲ್ಲದ ಕ್ಷೇತ್ರ, ಯಾರ ಸಂಪರ್ಕವೂ ಇಲ್ಲದ ನಮಗೆ ಸಿನಿಮಾ ಅವಕಾಶ ಹೇಗೆ ಸಿಗುತ್ತದೆ, ಎಸ್ಟೇಟ್ ನೋಡಿಕೊಂಡಿರೋದೇ ವಾಸಿ ಎಂದು ಪಿಯುಸಿವರೆಗೆ ತಮ್ಮ ಮನಸ್ಸಿಗೆ ಬುದ್ಧಿ ಹೇಳುತ್ತಾ ಬಂದವರು ಗುರು. ಆದರೆ, ಗುರು ಮನಸ್ಸು ಆ ಬುದ್ಧಿವಾದವನ್ನು ಹೆಚ್ಚು ದಿನ ಕೇಳುವುದಿಲ್ಲ. ಅದೊಂದು ದಿನ ಮತ್ತೆ ಗುರು ಕೆಂಪು ಬಸ್ಸು ಹತ್ತಿಕೊಂಡು ಬೆಂಗಳೂರಿಗೆ ಬರುತ್ತಾರೆ. ಈ ಬಾರಿ ತಂದೆ-ತಾಯಿಗೆ ತನ್ನನ್ನು ಹುಡುಕುವ ಉಸಾಬರಿ ಅಥವಾ ಮಗ ಮತ್ತೆಲ್ಲಿ ಕಾಣೆಯಾದ ಎಂದು ಭಯಪಡೋದು ಬೇಡ ಎಂಬ ಕಾರಣಕ್ಕೆ “ನಾನು ಬೆಂಗಳೂರಿನಲ್ಲಿದ್ದೀನಿ, ಇಲ್ಲೇ ಏನೋ ಕೆಲಸ ಮಾಡಿಕೊಂಡು ಆರಾಮವಾಗಿದ್ದೇನೆ. ನೀವು ಟೆನ್ಷನ್ ಮಾಡ್ಕೊಬೇಡಿ …’ ಎಂದು ಮನೆಗೆ ಪತ್ರ ಬರೆಯುತ್ತಾರೆ.
ಸಣ್ಣಪುಟ್ಟ ಕೆಲಸ ಮಾಡುತ್ತಾ ನಟನೆಯ ಹಪಹಪಿಯಲ್ಲಿದ್ದ ಗುರುನಂದನ್ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ್ದು “ಇತ್ಯರ್ಥ’ ಟೆಲಿಫಿಲಂ ಮೂಲಕ. ಅದರಲ್ಲೊಂದು ಸಣ್ಣ ಪಾತ್ರ ಮಾಡುವ ಮೂಲಕ ನಟನೆಯ ಬೋಣಿ ಆರಂಭಿಸಿದ ಗುರುನಂದನ್ ಆ ನಂತರವೂ ಗಾಂಧಿನಗರವನ್ನು ಅದೆಷ್ಟು ಬಾರಿ ಸುತ್ತ ಹಾಕಿದ್ದಾರೋ ಅವರಿಗೆ ಲೆಕ್ಕವಿಲ್ಲ. ಹೀಗಿರುವಾಗ ಗುರುನಂದನ್‌ಗೆ “ಲಕುಮಿ’, “ಮುಕ್ತ ಮುಕ್ತ’ ಧಾರಾವಾಹಿಗಳಲ್ಲಿ ಅವಕಾಶ ಸಿಗುತ್ತದೆ. ಹಾಗೆ ನೋಡಿದರೆ ಗುರುನಂದನ್ ಎಂಬ ನಟನಿದ್ದಾನೆಂಬುದು ಬಣ್ಣದ ಲೋಕಕ್ಕೆ, ಜನರಿಗೆ ಗೊತ್ತಾಗಿದ್ದು “ಲಕುಮಿ’ ಧಾರಾವಾಹಿ ಮೂಲಕ. ಆ ಧಾರಾವಾಹಿ ಗುರುನಂದನ್‌ಗೆ ಒಂದು ಬ್ರೇಕ್ ಕೊಟ್ಟಿತೆಂದರೆ ತಪ್ಪಲ್ಲ. ಆ ಧಾರಾವಾಹಿಯೇನೋ ಬ್ರೇಕ್ ಕೊಟ್ಟಿತು, ಅದು ಮುಗಿದ ನಂತರ ಮುಂದೇನು ಎಂದು ನೋಡಿದಾಗ ಗುರುನಂದನ್‌ಗೆ ಭಯ ಕಾಡುತ್ತದೆ. ಏಕೆಂದರೆ ಬೇರೆ ಯಾವುದೇ ಹೊಸ ಆಫರ್‌ಗಳಿರುವುದಿಲ್ಲ. ಕೈಯಲ್ಲಿ ಕೆಲಸವಿಲ್ಲದೇ ಬೆಂಗಳೂರಲ್ಲಿ ಜೀವನ ನಡೆಸೋದು ಬೇರೆ ಕಷ್ಟ. ಹೀಗೆ ಗುರುನಂದನ್ ಯೋಚಿಸುತ್ತಿದ್ದಾಗ ಸಿಕ್ಕಿದ್ದೇ “ಸೈಬರ್ ಯುಗದೊಳ್ ಮಧುರ ಪ್ರೇಮ ಕಾವ್ಯಂ’ ಚಿತ್ರ. ಗುರುನಂದನ್ ನಟಿಸಿದ ಮೊದಲ ಸಿನಿಮಾವಿದು. ಕೊನೆಗೂ ಹೀರೋ ಆದ ಖುಷಿ ಗುರುನಂದನ್‌ಗೆ. “ತುಂಬಾ ಕಷ್ಟಪಡುತ್ತಿದ್ದಾಗ ಸಿಕ್ಕಿದ್ದೇ ಮಧುರ ಕಾವ್ಯ ಸಿನಿಮಾ. ಅವಕಾಶ ಸಿಕ್ಕಾಗ ತುಂಬಾ ಖುಷಿಯಾದೆ. ಏಕೆಂದರೆ ಸಿನಿಮಾದಲ್ಲಿ ಹೀರೋ ಆಗಬೇಕೆಂಬುದು ನನ್ನ ಅನೇಕ ವರ್ಷಗಳ ಕನಸು. ಅದು ಈಡೇರಿದ ಖುಷಿಯಲ್ಲೇ ಶೂಟಿಂಗ್‌ನಲ್ಲಿ ಪಾಲ್ಗೊಂಡೆ. ಸಿನಿಮಾ ಕೂಡಾ ಬಿಡುಗಡೆಯಾಯಿತು. ಆದರೆ, ಸಿನಿಮಾ ಮಾತ್ರ ನಾವು ಅಂದುಕೊಂಡಂತೆ ಹೋಗಲಿಲ್ಲ’ ಎಂದು ತಮ್ಮ ಮೊದಲ ಸಿನಿಮಾದ ಬಗ್ಗೆ ಹೇಳುತ್ತಾರೆ ಗುರುನಂದನ್.
ಮೊದಲೇ ಹೇಳಿದಂತೆ ಗುರುನಂದನ್‌ಗೆ ಹೀರೋ ಪಟ್ಟ ಸಿಕ್ಕಿರುತ್ತದೆ. ಸಿನಿಮಾ ಬಿಡುಗಡೆಯಾಗಿ ಸೋತೋಗಿರುತ್ತದೆ. ಗಾಂಧಿನಗರದ ದೃಷ್ಟಿಯಲ್ಲಿ ಒಮ್ಮೆ ಹೀರೋ ಆದರೆ ಆತ ಮತ್ತೆ ಹೀರೋ ಆಗಿಯೇ ಮಾಡಬೇಕು. ನಿರ್ದೇಶಕನಾದವ, ಮತ್ತೆ ಸಹಾಯಕ ನಿರ್ದೇಶಕನಾದರೆ ಅದು ಮರ್ಯಾದೆಗೆ ಕುಂದುಬರುತ್ತದೆ ಎಂದು ಭಾವಿಸುವವರು ಜಾಸ್ತಿ. ಹಾಗಾಗಿ, ಹೀರೋ ಆಗುವ ಮುನ್ನ ಸಾಕಷ್ಟು ಪಾತ್ರಗಳಲ್ಲಿ ನಟಿಸುತ್ತಿದ್ದ ನಟ ಒಮ್ಮೆ ಹೀರೋ ಆದರೆ, ಅದರಲ್ಲೂ ಆತನ ಸಿನಿಮಾ ಸೋತರೆ ಮತ್ತೆ ಆತನಿಗೆ ಹಿಂದೆ ಸಿಗುತ್ತಿದ್ದ ಪಾತ್ರಗಳು ಕೂಡಾ ಸಿಗುವುದಿಲ್ಲ. “ಮಧುರ ಕಾವ್ಯಂ’ ಚಿತ್ರ ಸೋಲುವ ಮೂಲಕ ಗುರುನಂದನ್‌ಗೂ ಅಂತಹುದೇ ಅನುಭವವಾಗುತ್ತದೆ. ಸಿನಿಮಾಕ್ಕಾಗಿ ಧಾರಾವಾಹಿ ಕೂಡಾ ಬಿಟ್ಟಾಗಿದೆ. ಬೇರೆ ಅವಕಾಶಗಳಿಲ್ಲ. ಎರಡು ವರ್ಷ ಗುರುನಂದನ್ ಅಕ್ಷರಶಃ ಕಷ್ಟದ ಜೊತೆಗೆ ಮಾನಸಿಕವಾಗಿ ನೋವು ಕೂಡಾ ಅನುಭವಿಸಿದ್ದಾರೆ. “ಸಿನಿಮಾ ಸೋತ ನಂತರ ಯಾವುದೇ ಅವಕಾಶಗಳಿರಲಿಲ್ಲ. ಮುಂದೇನು ಮಾಡೋದೆಂದು ತೋಚದೇ ಇದ್ದ ಸಮಯವದು. ಈ ಕಡೆ ಜೀವನ ಕೂಡಾ ಸಾಗಬೇಕು. ಧಾರಾವಾಹಿಯಿಂದ ಅವಕಾಶವಿದ್ದರೂ ಮತ್ತೆ ಕಿರುತೆರೆಗೆ ಹೋಗೋದಾ ಬೇಡ್ವಾ ಎಂಬ ಗೊಂದಲ ಕೂಡಾ ಇತ್ತು. ಕೊನೆಗೆ “ಚಾರ್ಲಿ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಕೂಡಾ ಮಾಡಿದೆ. ಈ ಸಿನಿಮಾದಲ್ಲೇ “ಚಿರವಾದ ನೆನಪು’, “ಟ್ಯೂಬ್‌ಲೈಟ್’ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ನಟಿಸಿದೆ.
“ಫಸ್ಟ್ ರ್‍ಯಾಂಕ್ ರಾಜು’ ಚಿತ್ರ ನೂರು ದಿನ ಓಡುವ ಮೂಲಕ ಗುರುನಂದನ್‌ಗೆ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. ಒಂದು ಕಾಮಿಡಿ ಸಬೆjಕ್ಟ್ಗೆ ಗುರುನಂದನ್ ಹೊಂದಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಬಾಯಿ ಮಾತಿನಿಂದಲೇ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ಮೂಲಕ ಗುರು ಬೇಡಿಕೆ ಕೂಡಾ ಹೆಚ್ಚುತ್ತದೆ. ಸದ್ಯ ಗುರುನಂದನ್ “ಸ್ಮೈಲ್ ಪ್ಲೀಸ್’ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಕೆ.ಮಂಜು ಈ ಚಿತ್ರದ ನಿರ್ಮಾಪಕ. ರಘು ಸಮರ್ಥ್ ನಿರ್ದೇಶನದ ಈ ಚಿತ್ರದಲ್ಲಿ ಗುರುಗೆ ಒಳ್ಳೆಯ ಪಾತ್ರವಿದೆಯಂತೆ. ಜೀವನದಲ್ಲಿ ಏನೇ ಕಷ್ಟಬಂದರೂ ನಗುತ್ತಾ ಇರಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆಯಂತೆ. ಅದು ಬಿಟ್ಟರೆ “ಫಸ್ಟ್ ರ್‍ಯಾಂಕ್ ರಾಜು’ ತಂಡದ ಮತ್ತೂಂದು ಸಿನಿಮಾದಲ್ಲೂ ಗುರುನಂದನ್ ನಾಯಕರಾಗಿ ನಟಿಸುತ್ತಿದ್ದಾರೆ. “ತುಂಬಾ ಅವಕಾಶಗಳು ಬರುತ್ತಿವೆ. ನೋಡಿಕೊಂಡು ಒಳ್ಳೆಯ ಸಿನಿಮಾಗಳನ್ನಷ್ಟೇ ಆಯ್ಕೆ ಮಾಡುತ್ತೇನೆ. ಒಂದು ಸಿನಿಮಾ ಗೆದ್ದ ಕೂಡಲೇ ನಾನೇನು ಸ್ಟಾರ್ ಆಗಿಲ್ಲ. ನನ್ನ ಹಿಂದಿನ ದಿನಗಳನ್ನು ಮರೆತಿಲ್ಲ. ಕೆಲವರು ನಾನು ಬದಲಾಗಿದ್ದೇನೆ ಎಂದೆಲ್ಲಾ ಗಾಸಿಪ್ ಹಬ್ಬಿಸುತ್ತಿದ್ದಾರೆ. ನನಗೆ ನನ್ನ ಕಷ್ಟದ ಅರಿವಿದೆ. ಕುಟುಂಬ ವರ್ಗ ಕುಳಿತು ನೋಡುವಂತಹ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ನನ್ನದು’ ಎನ್ನುವುದು ಗುರು ಮಾತು. ಬರಹ: ರವಿಪ್ರಕಾಶ್ ರೈ, ಚಿತ್ರಗಳು: ಮನು ಮತ್ತು ಸಂಗ್ರಹ