Advertisement

Chikkaballapura: ಮರು ಮದುವೆ ಒಪ್ಪಿ ವ್ಯಕ್ತಿಗೆ 7.40 ಲಕ್ಷ ರೂ. ವಂಚಿಸಿದ್ದ ಮಹಿಳೆ, ಬಂಧನ

11:37 PM Aug 30, 2024 | Team Udayavani |

ಚಿಕ್ಕಬಳ್ಳಾಪುರ: ಮರು ಮದುವೆ ಮಾಡಿಕೊಳ್ಳಲು ಕಲ್ಯಾಣ್ ಮ್ಯಾಟ್ರಿಮೋನಿ.ಕಾಮ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಜಿಲ್ಲೆಯ ವ್ಯಕ್ತಿಗೆ ಮದುವೆ ಮಾಡಿಕೊಳ್ಳಲು ಒಪ್ಪಿ ಮೇಸೆಜ್ ಕಳಿಸಿ ಬಳಿಕ ಆತನಿಂದ 7.40 ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಶಿವಮೊಗ್ಗ ಮೂಲದ ಮಹಿಳೆಯನ್ನು ಜಿಲ್ಲೆಯ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಮಹಿಳೆಯನ್ನು ಶಿವಮೊಗ್ಗ ಮೂಲದ ಕೋಮಲಾ ಎಂದು ಗುರುತಿಸಲಾಗಿದೆ. ಮಹಿಳೆಯಿಂದ  ಆ್ಯಪಲ್ ಪೋನ್, 20,940 ರೂಪಾಯಿ ನಗದನ್ನು ಪೊಲೀಸರು ವಶಪಡಿಸಿದ್ದಾರೆ.  ಈಕೆಯ ಪತಿ ಕೆಪಿಟಿಸಿಎಲ್ ನೌಕರರಾಗಿ 2017 ರಲ್ಲಿ ಮೃತಪಟ್ಟಿದ್ದು, ಬಳಿಕ ಆಕೆಯು ಬೆಂಗಳೂರಿನಲ್ಲಿ ನೆಲೆಸಿ ತನ್ನ ವಿಲಾಸಿ ಜೀವನಕ್ಕಾಗಿ ಹಲವು ಪುರುಷರಿಗೆ ಇದೇ ರೀತಿ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಗೌರಿಬಿದನೂರಿನ ಸುಮಂಗಲಿ ಬಡಾವಣೆ ನಿವಾಸಿ ರಾಘವೇಂದ್ರ ಬಿನ್ ದೊಡ್ಡಲಿಂಗಪ್ಪ (35) ಮರು ಮದುವೆಯಾಗಲು ಕಲ್ಯಾಣ್ ಮ್ಯಾಟ್ರಿಮೋನಿ.ಕಾಮ್ ನಲ್ಲಿ, ರಿಜಿಸ್ಟರ್ ಮಾಡಿದ್ದು ಕೋಮಲ ಕೂಡ ಮಾಟ್ರಿಮೋನಿ ಐಡಿಗೆ ರಿಕ್ವೆಸ್ಟ್‌ ಕಳುಹಿಸಿದ್ದಾಳೆ.

ಬಳಿಕ ಮೊಬೈಲ್‌ನಿಂದ ರಾಘವೇಂದ್ರಗೆ ಮೆಸೇಜ್ ಮಾಡಿ ತನ್ನ ಗಂಡ ತೀರಿ ಹೋಗಿದ್ದು ಮಕ್ಕಳಿಲ್ಲ ನಾನು ನಿನ್ನ ಜೊತೆ ಮದುವೆ ಆಗುತ್ತೇನೆಂದು ನಂಬಿಸಿ ನನ್ನ ಗಂಡನು ಮೃತ ಪರಿಹಾರ ಹಣ 6 ಕೋಟಿ ರೂಪಾಯಿಗಳು ತೆರಿಗೆ ಕಟ್ಟದ ಕಾರಣ ನನ್ನ ಬ್ಯಾಂಕ್ ಖಾತೆಯಲ್ಲಿ ಬ್ಲಾಕ್‌ ಆಗಿದ್ದು, ತೆರಿಗೆ  ಹಣ ಕಟ್ಟಲು  7,40,000 ರೂ.ಗಳನ್ನು ಬೇಕೆಂದು ಆಕೆಯ ತಾಯಿ ರಾಧಾ ಎಂಬವರ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ನಂತರ ಮಹಿಳೆ ರಾಘವೇಂದ್ರ ಅವರ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಬ್ಲಾಕ್ ಮಾಡಿದ್ದಾಳೆ. ಈ ಬಗ್ಗೆ ರಾಘವೇಂದ್ರ ಸೈಬರ್ ಠಾಣೆಗೆ ದೂರು ನೀಡಿದ್ದರು.

ಕುಂದಾಪುರ ನಿವಾಸಿಗೂ ಮೋಸ:
ಬಂಧಿತ ಕೋಮಲಾ ಈ ಹಿಂದೆ ಗುಜರಾತ್ ನಲ್ಲಿ ನೆಲೆಸಿರುವ ಕುಂದಾಪುರದ ನಿವಾಸಿ ರಾಘವೇಂದ್ರ ಎಂಬವರಿಗೆ ಮೋಸ ಮಾಡಿ 25,000 ರೂ. ಹಣ ಹಾಕಿಸಿಕೊಂಡಿದ್ದಳು. ಇದೇ ರೀತಿ ಬೆಂಗಳೂರು ನಗರದ ವಾಸಿಯಾದ ನಾಗರಾಜು ಕೂಡ ಮೋಸ ಮಾಡಿ 1,50,000 ರೂ. ಹಣ ಹಾಕಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರೋಪಿಗೆ ಈಗಾಗಲೇ 20 ವರ್ಷದ ಗಂಡು ಮಗ ಮತ್ತು 16 ವರ್ಷದ ಮಗಳಿದ್ದು ಈಕೆಯ ಗಂಡ ರಮೇಶ್ ಶಿವಮೊಗ್ಗದಲ್ಲಿ ಕೆ.ಪಿ.ಟಿ.ಸಿ.ಎಲ್. ನೌಕರನಾಗಿದ್ದು 2017 ರಲ್ಲಿ ನಿಧನರಾಗಿದ್ದಾರೆ. ತನ್ನ ವಿಲಾಸಿ ಜೀವನಕ್ಕಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಈಕೆ ಜನರಿಗೆ ಮೋಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next